ಬೆಂಗಳೂರು: ರಾಜಾಜಿನಗರದ ಶ್ರೀ ಮಾತೆ ಮಹಾದೇವಿಯವರ ಬಸವ ಮಂಟಪದಲ್ಲಿ ನೀರವ ಮೌನ. ಶೋಕ ಸಾಗರದಲ್ಲಿ ಭಕ್ತರು ಲಿಂಗೈಕ್ಯರಾದ ಮಾತೆ ಮಹಾದೇವಿಯವರ ಅಂತಿಮ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಶೋಕಸಾಗರದಲ್ಲಿ ದುಃಖತಪ್ತರಾಗಿ ಅಂತಿಮ ನಮನ ಸಲ್ಲಿಸುತ್ತಿದ್ದರು.
ವಿವಿಧ ಮಠಾಧೀಶರು, ರಾಜಕೀಯ ಪಕ್ಷಗಳ ಮುಖಂಡರು, ಸಂಘಟನೆಗಳವರು, ಕನ್ನಡ ಪರ ಹೋರಾಟಗಾರರು ಸೇರಿದಂತೆ ಸ್ಥಳೀಯ ನಾಯಕರು ಆಗಮಿಸಿ ಮಾತೆ ಮಹಾದೇವಿಯವರಿಗೆ ನಮಿಸಿದರು.
ಅನಾರೋಗ್ಯದಿಂದ ನಿನ್ನೆ ಲಿಂಗೈಕ್ಯರಾದ ಪ್ರಥಮ ಲಿಂಗಾಯತ ಮಹಿಳಾ ಜಗದ್ಗುರು ಮಾತೆ ಮಹಾದೇವಿ ಅವರ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ ಬಸವ ವಿಧಿವಿಧಾನದಂತೆ ಕೂಡಲಸಂಗಮದಲ್ಲಿ ನೆರವೇರಲಿದೆ.
ಬೆಂಗಳೂರಿನ ರಾಜಾಜಿನಗರದ ಬಸವ ಮಂಟಪದಲ್ಲಿ ಮಾತೆ ಮಹಾದೇವಿಯವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿಂದ ಶ್ರೀ ಮಾತೆ ಮಹಾದೇವಿಯವರ ಪಾರ್ಥಿವ ಶರೀರವನ್ನು ತುಮಕೂರು, ಚಿತ್ರದುರ್ಗ, ಚಳ್ಳಕೆರೆ ಮಾರ್ಗವಾಗಿ ಕೂಡಲಸಂಗಮಕ್ಕೆ ಕೊಂಡೊಯ್ಯಲಾಗುವುದು.
ಮಾರ್ಗಮಧ್ಯೆ ಚಿತ್ರದುರ್ಗದಲ್ಲೂ ಕೂಡ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ನಂತರ ರಾತ್ರಿ 9 ಗಂಟೆಗೆ ಕೂಡಲಸಂಗಮದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಮಾತೆ ಮಹಾದೇವಿಯ ಅಂತಿಮ ದರ್ಶನ
ನಾಳೆ ಮಧ್ಯಾಹ್ನ 3 ಗಂಟೆಯಿಂದ ಸಂಜೆ ೫ ಗಂಟೆಯೊಳಗೆ ಜಂಗಮ ಮೂರ್ತಿಗಳಿಂದ ವಚನ ಸಾಹಿತ್ಯದ ಮೂಲಕವೇ ಅಂತಿಮ ಸಂಸ್ಕಾರ ನಡೆಸಲಾಗುವುದು ಮಠದ ಉತ್ತರಾಧಿಕಾರಿ ಗಂಗಾದೇವಿ ಮಾತೆಯವರು ತಿಳಿಸಿದ್ದಾರೆ.ಕಳೆದ 10 ವರ್ಷಗಳ ಹಿಂದೆಯೇ ಮಾತೆ ಮಹಾದೇವಿ ಅವರ ಸಮಾಧಿ ನಿರ್ಮಿಸಲಾಗಿದ್ದು, ಅದರಲ್ಲಿ ವಿಭೂತಿಗಟ್ಟಿಗಳ ಮೂಲಕ ಮಾತೆ ಮಹಾದೇವಿಯವರ ಅಂತಿಮ ಸಂಸ್ಕಾರ ಮಾಡಲಾಗುವುದು.ಈ ಎಲ್ಲಾ ವಿಧಿವಿಧಾನಗಳು ಹೇಗಿರಬೇಕು ಎಂಬುದನ್ನು ಅವರು ಈ ಮೊದಲೇ ಪುಸ್ತಕದಲ್ಲಿ ನಮೂದಿಸಿದ್ದಾರೆ.
ಬಸವಧರ್ಮದ ಆಚರಣೆಗಳ ಪ್ರಕಾರವೇ ನಡೆಸಲಾಗುವುದು ಎಂದು ಮಠದ ಆಡಳಿತ ಮಂಡಳಿ ತಿಳಿಸಿದೆ.ಕಳೆದ ಒಂದು ವಾರದಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಅವರಿಗೆ ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತಾದರೂ ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಲಿಂಗೈಕ್ಯರಾದರು.