ಮಂಗಳೂರು : ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ, ಅಪರಾಧ ಚಟುವಟಿಕೆಗಳನ್ನು ನಡೆಸದಂತೆ ಮಂಗಳೂರು ನಗರ ಪೊಲೀಸ್ ಕಮಿಷನರೇಟ್‌ನ 22 ಪೊಲೀಸ್ ಠಾಣೆಗಳ ವ್ಯಾಪ್ತಿಯ ಸುಮಾರು 200 ರೌಡಿಗಳಿಗೆ ಇಂದು ಬೆಳಗ್ಗೆ ಪರೇಡ್ ನಡೆಸಲಾಯಿತು.
ಈ ಸಂದರ್ಭ ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ರೌಡಿಗಳ ವಿಚಾರಣೆ ನಡೆಸಿ, ನಿಮ್ಮೆಲ್ಲರ ಮೇಲೆ ಈಗಾಗಲೇ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸಿದ ಹಿನ್ನೆಲೆಯಲ್ಲಿ ಪ್ರಕರಣಗಳು ದಾಖಲಾಗಿವೆ. ನಿಮ್ಮ ಚಲನವಲನಗಳನ್ನು ಗಮನಿಸಿ, ಮುಂದೆ ಯಾವುದೇ ಅಪರಾಧಗಳಲ್ಲಿ ಭಾಗವಹಿಸದಿದ್ದರೆ ನಿಮ್ಮಿಂದ ತೆಗೆದುಕೊಂಡಿರುವ ಮುಚ್ಚಳಿಕೆ ಬರಹಗಳನ್ನು ಹಿಂದಕ್ಕೆ ಪಡೆದುಕೊಳ್ಳುತ್ತೇವೆ.
ಹಾಗಾಗಿ ನೀವು ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸದೆ ಸಾಮಾನ್ಯ ನಾಗರಿಕರಾಗಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರದಂತೆ ವರ್ತಿಸಬೇಕು. ಆಮೇಲೆಯೂ ನೀವು ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ನಿಮ್ಮ ಮೇಲೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು, ಅಪರಾಧ ಚಟುವಟಿಕೆಗಳನ್ನು ನಡೆಸದಂತೆ ರೌಡಿಗಳ ಮೇಲೆ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ.
ಈಗಾಗಲೇ 1,000 ಮಂದಿ ಅಪರಾಧಿಗಳನ್ನು ಗುರುತಿಸಿ ಪ್ರಕರಣಗಳನ್ನು ದಾಖಲಿಸಿದ್ದೇವೆ. ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಮಂಗಳೂರು ನಗರ ಪೊಲೀಸ್ ಕಮಿಷನರೇಟ್‌ನ ಎಲ್ಲಾ ಠಾಣೆಗಳ ವ್ಯಾಪ್ತಿಯ ರೌಡಿಗಳ ಮನೆಗಳಿಗೆ ಏಕಕಾಲದಲ್ಲಿ ತೆರಳಿ ಅವರ ಮನೆಗಳಲ್ಲಿ ಮಾರಕಾಯುಧಗಳು ಇವೆಯೇ ಎಂದು ಪತ್ತೆ ಕಾರ್ಯ ಕೈಗೊಳ್ಳಲಾಗಿದೆ.
ನಗರಾದ್ಯಂತ ಇರುವ ರೌಡಿಗಳನ್ನು ಕಚೇರಿಗೆ ಕರೆಸಿ ಅವರ ಚಲನವಲನಗಳ ಬಗ್ಗೆ ನಿಗಾ ಇರಿಸಿದ್ದೇವೆ. ಅಲ್ಲದೆ ಚುನಾವಣೆಯ ಸಂದರ್ಭ ಯಾವುದೇ ರೀತಿಯ ಅಹಿತಕರ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಅವರಿಂದ ಮುಚ್ಚಳಿಕೆ ಬರೆಸಿದ್ದೇವೆ ಎಂದು ಹೇಳಿದರು.
ಅವರು ಯಾವ ವಾಹನಗಳನ್ನು ಬಳಸುತ್ತಿದ್ದಾರೆ. ಅವುಗಳ ದಾಖಲೆಗಳಿವಯೇ ಅಥವಾ ಕಳ್ಳತನ ಮಾಡಿದ ವಾಹನಗಳನ್ನು ಬಳಸುತ್ತಿದ್ದಾರೆಯೇ ಎಂಬುವುದರ ಬಗ್ಗೆ ಎಂದು ತನಿಖೆ ನಡೆಸಲಾಗಿದೆ ಎಂದರು.