ಜೈಷ್-ಎ-ಮೊಹಮ್ಮದ್ ಸೇರಿದಂತೆ ಭಾರತದ ಮೇಲೆ ಆಕ್ರಮಣ ಮಾಡುತ್ತಿರುವ ಉಗ್ರ ಸಂಘಟನೆಯ ವಿರುದ್ಧ ವಿಶ್ವದ ಹಲವಾರು ರಾಷ್ಟ್ರಗಳು ಸಿಡಿದೆದ್ದಿವೆ. ಫೆಬ್ರವರಿ 14 ರಂದು ಜೈಷ್-ಎ-ಮೊಹಮ್ಮದ್ ಸಂಘಟನೆ ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಭಾರತದ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಕೇಂದ್ರ ಪೊಲೀಸ್ ಮೀಸಲು ಪಡೆಯ ೪೦ಕ್ಕೂ ಹೆಚ್ಚು ಜವಾನರು ಹುತಾತ್ಮರಾಗಿದ್ದರು.
ಪುಲ್ವಾಮಾ ದಾಳಿ ಮಾತ್ರವಲ್ಲ, 2001 ರ ಡಿಸೆಂಬರ್ 13 ರಂದು ನಡೆದ ಸಂಸತ್ ದಾಳಿ ಸೇರಿದಂತೆ, ಕಳೆದೆರಡು ದಶಕಗಳಲ್ಲಿ ಮಸೂದ್ ಅಜರ್ ಹಲವಾರು ಭಯೋತ್ಪಾದಕ ಕೃತ್ಯಗಳನ್ನು ಭಾರತದಲ್ಲಿ ಎಸಗಿದ್ದಾನೆ. ಆತನನ್ನು ಭಾರತಕ್ಕೆ ಒಪ್ಪಿಸಬೇಕೆಂದು ಪಾಕಿಸ್ತಾನಕ್ಕೆ ಆಗ್ರಹಿಸುತ್ತಲೇ ಇದೆ. ಆದರೆ, ತಲೆಕೆಡಿಸಿಕೊಳ್ಳದ ಪಾಕಿಸ್ತಾನ ಆ ಸಂಘಟನೆಯ ವಿರುದ್ಧ ಕ್ರಮ ತೆಗೆದುಕೊಳ್ಳಲು ಕೂಡ ಹಿಂಜರಿಯುತ್ತಿದೆ.
2016 ರ ಜನವರಿಯಲ್ಲಿ ಪಠಾಣ್ ಕೋಟ್ ಮೇಲೆ ದಾಳಿ ನಡೆಸಿದ್ದ ಜೈಷ್-ಎ-ಮೊಹಮ್ಮದ್ ಸಂಘಟನೆ ಏಳು ಭಾರತೀಯ ಯೋಧರನ್ನು ಹತ್ಯೆಗೈದಿತ್ತು. ನಂತರ ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ಸೇನಾ ನೆಲೆಯ ಮೇಲೆ ದಾಳಿ ನಡೆಸಿದ್ದ ಜೈಷ್ ಉಗ್ರರು 17 ಭಾರತೀಯ ಯೋಧರನ್ನು ಕೊಂದು ಹಾಕಿತ್ತು. ಇನ್ನು ಭಾರತದೊಳಗೆ ನುಸುಳಿಬಂದು ನಡೆಸುತ್ತಿರುವ ಹಿಂಸಾತ್ಮಕ ಕೃತ್ಯಗಳಿಗೆ ಲೆಕ್ಕವೇ ಇಲ್ಲ.
ಜಾಗತಿಕ ಉಗ್ರ, ಪಾಕಿಸ್ತಾನದಲ್ಲಿ ಬೀಡುಬಿಟ್ಟಿರುವ ಜೈಷ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಮುಖಂಡ ಮಸೂದ್ ಅಜರ್ ಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಫ್ರಾನ್ಸ್ ಸರಕಾರ ಹೇಳಿದೆ.
ಫ್ರಾನ್ಸ್ ನ ಆಂತರಿಕ ಸಚಿವಾಲಯ, ಹಣಕಾಸು ಸಚಿವಾಲಯ ಮತ್ತು ವಿದೇಶಾಂಗ ಸಚಿವಾಲಯ ಜಂಟಿಯಾಗಿ ನೀಡಿರುವ ಹೇಳಿಕೆಯಲ್ಲಿ, ಭಯೋತ್ಪಾದನೆಯಲ್ಲಿ ನಿರತರಾಗಿರುವ ಶಂಕಿತ ಉಗ್ರರ ಯುರೋಪಿಯನ್ ಯೂನಿಯನ್ ಪಟ್ಟಿಯಲ್ಲಿ ಮಸೂದ್ ಅಜರ್ ಹೆಸರನ್ನು ಸೇರಿಸಲಾಗುವುದು ಎಂದಿವೆ.
ಮಸೂದ್ ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಬೇಕೆಂದು ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಪ್ರಸ್ತಾವನೆಯನ್ನು ಚೀನಾ ವಿರೋಧಿಸಿದ ಮರುದಿನವೇ ಫ್ರಾನ್ಸ್, ಪಾಕಿಸ್ತಾನದಲ್ಲಿ ಅವಿತುಕೊಂಡಿರುವ ಉಗ್ರ ಮಸೂದ್ ನ ಆಸ್ತಿಯನ್ನು ಮುಟ್ಟುಗೋಲು ಹಾಕಲು ನಿರ್ಧರಿಸಿದೆ.