ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಈ ಸಲ ಹೆಚ್ಚಿನ ನೀರಿನ ಸಂಗ್ರಹವಿದ್ದು ಮೈಸೂರು, ಬೆಂಗಳೂರು ಮತ್ತು ಮಂಡ್ಯ ಭಾಗದಲ್ಲಿ ಕುಡಿಯುವ ನೀರಿಗೆ ಬರ ಎದುರಾಗದಂತೆ ಕಾಣುತ್ತಿದೆ.
ಕೆಆರ್‌ಎಸ್ ಜಲಾಶಯದಲ್ಲಿ ಪ್ರಸ್ತುತ ನೀರಿನ ಮಟ್ಟ 102 ಅಡಿಗಳಷ್ಟಿದೆ.
45.05 ಟಿಎಂಸಿ ಅಡಿ ಸಾಮಥ್ರ್ಯದ ಜಲಾಶಯದಲ್ಲಿ 20.14 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 9.57 ಟಿಎಂಸಿ ಅಡಿ ನೀರು ಇತ್ತು. ಬೆಂಗಳೂರು, ಮೈಸೂರು ನಗರ ಸೇರಿದಂತೆ ಇತರ 47 ಪಟ್ಟಣಗಳು, 625 ಗ್ರಾಮಗಳ ಜನರು ದಿನಬಳಕೆ ಮತ್ತು ಕುಡಿಯುವ ನೀರಿಗೆ ಕೆಆರ್‌ಎಸ್ ಜಲಾಶಯ ಅವಲಂಬಿಸಿದ್ದಾರೆ.
ಕೃಷಿ ಚಟುವಟಿಕೆಗಳಿಗೆ ಬಿಡುವ ನೀರಿನ ಪ್ರಮಾಣವನ್ನು ಕಡಿಮೆಗೊಳಿಸಲಾಗಿದೆ. ಕಾವೇರಿ ಕಣಿವೆಯಲ್ಲಿ ಉತ್ತಮ ಮಳೆಯಾಗಿದ್ದರಿಂದ ಜುಲೈ ಎರಡನೇ ವಾರದಲ್ಲೇ ಜಲಾಶಯ ಭರ್ತಿಯಾಗಿತ್ತು.
ಕಬಿನಿ ಜಲಾಶಯದಲ್ಲೂ ಕಳೆದ ಬಾರಿಗಿಂತ ಹೆಚ್ಚಿನ ನೀರಿನ ಸಂಗ್ರಹ ಇದೆ. 15.67 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 8.67 ಟಿಎಂಸಿ ಅಡಿ ನೀರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 4.74 ಟಿಎಂಸಿ ಅಡಿ ನೀರು ಇತ್ತು. ಆದರೆ, ಹೇಮಾವತಿ, ಹಾರಂಗಿ ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತಲೂ ಕಡಿಮೆ ನೀರಿದೆ.