ಉನ್ನಾವೊ, ಮಾ. ೧೭: ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರದ ಹೆಸರಿನಲ್ಲಿ ಹೋರಾಡುತ್ತೇವೆ; ಆ ಬಳಿಕ ಚುನಾವಣೆಗಳೇ ಇರುವುದಿಲ್ಲ ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
“ಮೋದಿ ಸುನಾಮಿ ದೇಶವನ್ನು ಜಾಗೃತಗೊಳಿಸಿದೆ. ೨೦೨೪ರಲ್ಲಿ ಚುನಾವಣೆಯೇ ಇರುವುದಿಲ್ಲ ಎನ್ನುವುದು ನನ್ನ ಭಾವನೆ.. ಇದು ಕಟ್ಟಕಡೆಯ ಚುನಾವಣೆ, ಇದರಲ್ಲಿ ನಾವು ಪೂರ್ಣ ಪ್ರಾಮಾಣಿಕತೆಯಿಂದ ದೇಶದ ಹೆಸರಿನಲ್ಲಿ ಹೋರಾಡುತ್ತೇವೆ” ಎಂದು ಪಕ್ಷದ ಸಮಾರಂಭವೊಂದರಲ್ಲಿ ಹೇಳಿದರು.
“೨೦೧೪ರ ಮೋದಿ ಅಲೆ ಇದೀಗ ೨೦೧೯ರಲ್ಲಿ ಸುನಾಮಿಯಾಗಿ ಮಾರ್ಪಟ್ಟಿದೆ. ಅವರು ಮತ್ತೆ ಪ್ರಧಾನಿಯಾಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಹಿಂದಿಗಿಂತಲೂ ಉತ್ತಮ ಫಲಿತಾಂಶ ಬರುತ್ತದೆ ಎಂಬ ನಿರೀಕ್ಷೆ ನಮ್ಮದು” ಎಂದರು.
“ಕೆಲವರು ಎಲ್ಲ ಬಗೆಯ ಕಸರತ್ತೂ ಮಾಡುತ್ತಿದ್ದಾರೆ… ಪ್ರಿಯಾಂಕಾ ಅವರನ್ನು ರಾಜಕೀಯಕ್ಕೆ ತಂದರು, ಮೈತ್ರಿ ಮಾಡಿಕೊಂಡರು, ಆದರೆ ಮೋದಿಯೇ ನಮ್ಮ ನಾಯಕ. ಮೋದಿ ಇದ್ದರಷ್ಟೇ ದೇಶ ಇರುತ್ತದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಈ ಪಕ್ಷ ಯಾರ ಹೆಸರಿನ ಅಥವಾ ಪಕ್ಷದ ಆಧಾರದಲ್ಲಿ ನಡೆಯುವುದಿಲ್ಲ. ಇದು ದೇಶದ ಹೆಸರಿನಲ್ಲಿ ನಡೆಯುತ್ತದೆ ಎಂದು ಸಾಕ್ಷಿ ಮಹಾರಾಜ್ ಹೇಳಿದ್ದಾರೆ.