ಧರ್ಮಸ್ಥಳ: ಕೆಎಸ್‌ಆರ್‌ಟಿಸಿ ಬಸ್ ಡಿಪೋದ ರೆಸ್ಟ್ ರೂಂನಲ್ಲಿ ಚಾಲಕ-ನಿರ್ವಾಹಕರೋರ್ವರು ಮಲಗಿದ್ದಲ್ಲೇ ಮೃತಪಟ್ಟ ಘಟನೆ ಧರ್ಮಸ್ಧಳದಲ್ಲಿ ನಡೆದಿದೆ.
ವಿಜಾಪುರದ ನಿವಾಸಿ ಸುರೇಶ್ ಬಡಿಗೇರ್(45) ಮೃತಪಟ್ಟ ದುರ್ದೈವಿ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ರಜೆ ಕೇಳಿದರೂ, ಹೆಚ್ಚುವರಿಯಾಗಿ ದುಡಿಸಿಕೊಂಡ ಕಾರಣ ತೀವ್ರ ಕಾಯಿಲೆಗೆ ಒಳಗಾಗಿ ಮೃತಪಟ್ಟಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಕಳೆದ ವಾರದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕರಾಗಿರುವ ಇಲ್ಲಿನ ಸಿಬ್ಬಂದಿ ಗದಗ್‌ನ ಜಗದೀಶ್ ಹಾಗೂ ಕ್ಲೀನರ್ ಶಿವಮೊಗ್ಗದ ಮಂಜುನಾಥ ಎಂಬವರು ಮೃತಪಟ್ಟಿದ್ದು, ಈ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಬೇಕಾಗಿದೆ ಎಂದು ಸಿಐಟಿಯು ಬೆಳ್ತಂಗಡಿ ತಾಲೂಕು ಸಮಿತಿಯು ಆಗ್ರಹಿಸಿದೆ.
ಧರ್ಮಸ್ಥಳ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಹಲವಾರು ಹಗರಣ, ಅವ್ಯವಹಾರಗಳ ಆಗರವಾಗಿದೆ. ಒಂದೇ ವಾರದಲ್ಲಿ ಇಲ್ಲಿನ ಮೂವರು ಸಿಬ್ಬಂದಿ ಮೃತಪಟ್ಟಿದ್ದು, ಡಿಪೋದಲ್ಲಿರುವ ಅಧಿಕಾರಿಗಳು ನೀಡುವ ಮಾನಸಿಕ ಕಿರುಕುಳವೇ ಈ ಸಾವುಗಳಿಗೆ ಕಾರಣ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಿಐಟಿಯು ಬೆಳ್ತಂಗಡಿ ತಾಲೂಕು ಸಮಿತಿ ಆಗ್ರಹಿಸಿದೆ.