ಉಡುಪಿ: ನಿನ್ನೆ ತನಕ ಕಾಂಗ್ರೆಸ್‍ನ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಪ್ರಮೋದ್, ದಿಢೀರ್ ಅಂತ ಮಾಜಿ ಪ್ರಧಾನಿ ದೇವೇಗೌಡ ಮತ್ತು ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಈ ಮೂಲಕ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಪ್ರಮೋದ್ ಮಧ್ವರಾಜ್ ಜೆಡಿಎಸ್ ಸೇರ್ಪಡೆಗೆ ತೆರೆಮರೆಯಲ್ಲಿ ಪ್ರಯತ್ನಿಸುತ್ತಿದ್ದು, ಉಡುಪಿ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಗೆ ಕಾರಣವಾಗಿದೆ.
ಜೆಡಿಎಸ್‍ನಲ್ಲಿ ಅವಕಾಶ ಕೊಟ್ಟರೆ ಸ್ಪರ್ಧಿಸುವುದಾಗಿ ಜೆಡಿಎಸ್ ವರಿಷ್ಠರ ಬಳಿ ಪ್ರಮೋದ್ ಮಧ್ವರಾಜ್ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ ಈ ಹಿನ್ನಲೆ ಅಂತಿಮ ನಿರ್ಧಾರ ಹೊರಬೀಳಲಿದೆ.
ಕಾಂಗ್ರೆಸ್ ಪಕ್ಷದಲ್ಲಿ ಶಾಸಕ ಮತ್ತು ಸಚಿವರಾಗಿ ಪ್ರಮೋದ್ ಕಾರ್ಯ ನಿರ್ವಹಿಸಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ರಘುಪತಿ ಭಟ್ ವಿರುದ್ಧ ಸೋಲನ್ನ ಅನುಭವಿಸಿದ್ದರು. ಬಳಿಕ ಬಿಜೆಪಿಯ ಕದವನ್ನೂ ತಟ್ಟಿ ಗಮನ ಸೆಳೆದಿದ್ದರು. ಆದರೆ ಕಾರಣಾಂತರಗಳಿಂದ ಬಿಜೆಪಿ ಸೇರ್ಪಡೆ ಸಾದ್ಯವಾಗಿರಲಿಲ್ಲ. ಇದೀಗ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿಯೇ ಸಿದ್ಧ ಎಂದು ಕಾಂಗ್ರೆಸ್ ಪಕ್ಷ ಅಥವಾ ಜೆಡಿಎಸ್ ಮೂಲಕ ಸ್ಪರ್ಧಿಸಲು ತೀವ್ರ ಕಸರತ್ತು ನಡೆಸುತ್ತಿದ್ದಾರೆ.
ಈಗಾಗಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರವು ಮೈತ್ರಿ ಪಕ್ಷದ ಒಪ್ಪಂದದಂತೆ ಜೆಡಿಎಸ್ ಪಾಲಾಗಿದೆ. ಹೀಗಿದ್ದರೂ, ಕಾಂಗ್ರೆಸ್ ಪ್ರಬಲವಾಗಿರುವ ಈ ಕ್ಷೇತ್ರವನ್ನು ಕಾಂಗ್ರೆಸ್‍ಗೆ ಬಿಟ್ಟುಕೊಡಬೇಕು ಎಂಬ ಪ್ರಯತ್ನವನ್ನೂ ಈ ಭಾಗದ ಮುಖಂಡರು ಮಾಡುತ್ತಿದ್ದಾರೆ. ಇದೇ ಹೊತ್ತಿಗೆ ಪ್ರಮೋದ್ ಮಧ್ವರಾಜ್ ಜೆಡಿಎಸ್ ಸೇರ್ಪಡೆ ದಾಳ ಉರುಳಿಸಿದ್ದು, ಬಿಜೆಪಿ ನಾಯಕರಲ್ಲೂ ಹೊಸ ಲೆಕ್ಕಾಚಾರಗಳಿಗೆ ನಾಂದಿ ಹಾಡಿದೆ.