ಪರಿಸರ ಮಾಲಿನ್ಯ ಯಾವ ಹಂತಕ್ಕೆ ಬಂದು ನಿಂತಿದೆ ಎಂಬುದಕ್ಕೆ ಈ ಪ್ರಕರಣಕ್ಕಿಂತ ಮತ್ತೊಂದು ನಿದರ್ಶನ ಬೇಕಿಲ್ಲ. ಪಿಲಿಪೈನ್ಸ್ ಸಮುದ್ರ ತೀರದಲ್ಲಿ ಜೀವ ಕಳೆದುಕೊಂಡ ತಿಮಿಂಗಿಲದ ಹೊಟ್ಟೆಯಲ್ಲಿ ಬರೋಬ್ಬರಿ 40 ಕೆಜಿ ಪ್ಲಾಸ್ಟಿಕ್ ಪತ್ತೆಯಾಗಿದೆ.
14.5 ಅಡಿ ಗಾತ್ರದ ತಿಮಿಂಗಿಲ ಮಾಬಿನಿ ಪಟ್ಟಣದ ಸಮುದ್ರ ತೀರಕ್ಕೆ ಬಂದು ಸಿಕ್ಕಿಹಾಕಿಕೊಂಡಿತ್ತು. ಪುನಃ ತಿಮಿಂಗಿಲವನ್ನು ಸಮುದ್ರಕ್ಕೆ ಸೇರಿಸುವ ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ. ಈಜಲು ಸಾಧ್ಯವಾಗದೆ ಮೂಕ ಪ್ರಾಣಿ ಕೊನೆಯುಸಿರೆಳೆಯಿತು.
ಹೊಟ್ಟೆಯಲ್ಲಿ 40 ಕೆಜಿ ಪ್ಲಾಸ್ಟಿಕ್ ತುಂಬಿದ್ದರಿಂದ ಆಹಾರ ಸೇವಿಸಲಾಗದೆ ನಿತ್ರಾಣಗೊಂಡಿದ್ದ ಜಲಚರ ಸಾವನ್ನಪ್ಪಿತು. ಪ್ಲಾಸ್ಟಿಕ್ ಬ್ಯಾಗ್ ಗಳು, ತಿಂದೆಸೆದ ಆಹಾರದ ಪೊಟ್ಟಣಗಳು ಸಾವಿಗೆ ಕಾರಣ ಎಂಬ ಆಘಾತಕಾರಿ ಅಂಶ ಎಲ್ಲರಿಗೂ ಒಂದು ಎಚ್ಚರಿಕೆ ಘಂಟೆಯಾಗಿದೆ.