ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಆಯುಷ್ಮಾನ್ ಭಾರತ್ ಯೋಜನೆ ಬಗ್ಗೆ ಎಐಐಎಂಎಸ್ ವೈದ್ಯರು ಸೇರಿದಂತೆ ಸಾರ್ವಜನಿಕ ಆರೋಗ್ಯ ತಜ್ಞರಿಂದ ವ್ಯಾಪಕ ಅಪಸ್ವರ ವ್ಯಕ್ತವಾಗಿದೆ. ಸರ್ಕಾರಿ ಹಣವನ್ನು ಖಾಸಗಿ ವಲಯಕ್ಕೆ ವರ್ಗಾಯಿಸುವ ಅಧಿಕೃತ ವಾಹಿನಿಯಾಗಿ ಈ ಯೋಜನೆ ಪರಿಣಮಿಸಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಈ ಹಿಂದೆ ಇಂಥದ್ದೇ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದನ್ನು ಉಲ್ಲೇಖಿಸಿ, ಸಾರ್ವತ್ರಿಕ ಆರೋಗ್ಯ ಸುರಕ್ಷೆಗಾಗಿ ಸಾರ್ವಜನಿಕ ವಲಯದ ಆಸ್ಪತ್ರೆಗಳನ್ನು ಬಲಪಡಿಸುವ ತುರ್ತು ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ. ಎಐಐಎಂಎಸ್ ಫ್ರಂಟ್ ಫಾರ್ ಸೋಶಿಯಲ್ ಕಾನ್ಷಿಯಸ್‍ನೆಸ್ ಆಯೋಜಿಸಿದ್ದ “ಆಯುಷ್ಮಾನ್ ಭಾರತ್ ಫ್ಯಾಕ್ಟ್ ಆಯಂಡ್ ಫಿಕ್ಷನ್” ಎಂಬ ಗುಂಪು ಚರ್ಚೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ.
“ಆಯುಷ್ಮಾನ್ ಭಾರತ್ ಎನ್ನುವುದು ಹೊಸ ಬಾಟಲಿಯ ಹಳೆ ಮದ್ಯ” ಎಂದು ಜೆಎನ್‍ಯು ಸಮಾಜ ಔಷಧ ಮತ್ತು ಸಮುದಾಯ ಆರೋಗ್ಯ ಕೇಂದ್ರದ ಪ್ರೊಫೆಸರ್ ಡಾ.ವಿಕಾಸ್ ಬಾಜಪೇಯಿ ಹೇಳಿದರು. ಸರ್ಕಾರಿ ಬೊಕ್ಕಸದಿಂದ ನೆರವು ನೀಡಲಾದ ಆರೋಗ್ಯ ವಿಮಾ ಯೋಜನೆಗಳಾದ ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆ ಅಥವಾ ಆರ್‍ಎಸ್‍ಬಿವೈನಂಥ ಯೋಜನೆಗಳ ವೈಫಲ್ಯವನ್ನು ವಿಶ್ಲೇಷಿಸುವುದು ಅಗತ್ಯ ಎಂದು ಅವರು ಒತ್ತಿ ಹೇಳಿದರು. “ಸರ್ಕಾರಿ ಹಣ ಖಾಸಗಿ ಸಂಸ್ಥೆಗಳಿಗೆ ಹರಿಯಲು ಇದೊಂದು ಅಧಿಕೃತ ವಾಹಿನಿಯ ಸೃಷ್ಟಿಯಷ್ಟೇ ಆಗಿದೆ” ಎಂದು ಅವರು ಅಭಿಪ್ರಾಯಪಟ್ಟರು.
ಎಐಐಎಂಎಸ್ ಜೀವ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಸುಬ್ರತೊ ಸಿನ್ಹಾ ಮಾತನಾಡಿ, “ಈ ಯೋಜನೆಯಡಿ ಹೊರರೋಗಿ ಚಿಕಿತ್ಸೆ ಪಡೆಯಲು ಅವಕಾಶವಿಲ್ಲ. ವಾಸ್ತವವಾಗಿ ಆರೋಗ್ಯ ವೆಚ್ಚದಲ್ಲಿ ಇದು ದೊಡ್ಡ ಅಂಶವಾಗಿದೆ. ಒಳರೋಗಿ ಚಿಕಿತ್ಸೆಯಷ್ಟೇ ಇದು ಕೂಡಾ ದುಬಾರಿ” ಎಂದು ಪ್ರತಿಪಾದಿಸಿದರು.
“ಆರೋಗ್ಯ ಸುರಕ್ಷಾ ಯೋಜನೆಯ ಮುಖ್ಯ ಉದ್ದೇಶ ಸಾರ್ವಜನಿಕ ಆರೋಗ್ಯ ಮೂಲ ಸೌಕರ್ಯವನ್ನು ಸುಧಾರಿಸುವುದು ಹಾಗೂ ಬಲಗೊಳಿಸುವುದಾಗಿರಬೇಕು. ನೇರವಾಗಿ ಸರ್ಕಾರ ನೀಡುವ ವೈದ್ಯಕೀಯ ಸೌಲಭ್ಯಕ್ಕೆ ಹೋಲಿಸಿದರೆ ವಿಮಾ ಯೋಜನೆಯ ಪ್ರಯೋಜನ ಕಡಿಮೆ” ಎಂದು ಹೇಳಿದರು.
“ಸರ್ಕಾರ ಆರೋಗ್ಯ ಸೇವೆ ಒದಗಿಸುವ ಬದಲು ಖಾಸಗಿಯವರಿಂದ ಅದನ್ನು ಖರೀದಿಸಲು ಮುಂದಾಗಿದೆ. ಇದು ತನ್ನ ಮೂಲ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಪ್ರಯತ್ನ” ಎಂದು ಮನೋರೋಗ ಚಿಕಿತ್ಸಾ ತಜ್ಞ ಡಾ.ಪ್ರತಾಪ್ ಶರಣ್ ವಿಶ್ಲೇಷಿಸಿದರು.