ಮೈಸೂರು: ಕನ್ನಡ ಸಾಹಿತ್ಯ ಲೋಕದ ಮೇರು ಜಾತ್ರೆ 83ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನ. 24ರಿಂದ ಮೂರು ದಿನಗಳ ಕಾಲ ಅರಮನೆ ನಗರಿ ಮೈಸೂರಿನಲ್ಲಿ ನಡೆಯಲಿದ್ದು, ಸಮ್ಮೇಳನಕ್ಕೆ ದಿನಗಣನೆ ಆರಂಭವಾಗಿದೆ.
ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಕನ್ನಡ -ಸಂಸ್ಕೃತಿ ಇಲಾಖೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಆದರೆ ಕನ್ನಡಿಗರ ಹೆಮ್ಮೆಯ, ಕನ್ನಡ ಸಾಹಿತ್ಯ ಲೋಕದ ಸ್ವಾಭಿಮಾನದ ಸಂಕೇತವಾದ ಸಮ್ಮೇಳ ನದ ಪ್ರಾಯೋಜಕತ್ವ ವಹಿಸಿಕೊಳ್ಳಲು ಜಿಲ್ಲೆಯ ಯಾವ ಉದ್ಯಮಿಗಳೂ ಮುಂದೆ ಬರುತ್ತಿಲ್ಲ.
ಸಮ್ಮೇಳನದ ಯಶಸ್ಸಿಗೆ ದುಡಿಯಲು 2,500 ಸ್ವಯಂ ಸೇವಕರನ್ನು ನಿಯೋಜಿಸಲಾಗುತ್ತಿದೆ. ಇವರಿಗೆ ಟೀ ಶರ್ಟ್ ಹಾಗೂ ಕ್ಯಾಪ್ ನೀಡಬೇಕಿದೆ. ಟೀ ಶರ್ಟ್‌ಗೆ5.50 ಲಕ್ಷ ರೂ., ಕ್ಯಾಪ್‌ಗೆ 1.75 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ನೋಂದಣಿ ಸಮಿತಿಯಿಂದ 12 ಸಾವಿರ ಪ್ರತಿನಿಧಿಗಳಿಗೆ ತಲಾ 250 ರೂ.ವೆಚ್ಚದ ಬ್ಯಾಗ್ ನೀಡಲು 30 ಲಕ್ಷ ರೂ., ಬರೆಯುವ ಹೊತ್ತಿಗೆ, ಪೆನ್ ನೀಡಲು 1.5 ಲಕ್ಷ ರೂ.ನಿಗದಿಪಡಿಸಲಾಗಿದೆ.
ಸಮ್ಮೇಳನಾಧ್ಯಕ್ಷರ ಮೆರವಣಿಗೆ ಸಾಗಿ ಬರುವ ಮಾರ್ಗ ದಲ್ಲಿ ಬಟ್ಟೆಯ ಬ್ಯಾನರ್, ಬಂಟಿಂಗ್ಸ್ ಕಟ್ಟಲು 2 ಲಕ್ಷ, 2,500 ಕನ್ನಡ ಬಾವುಟ ಕಟ್ಟಲು 4 ಲಕ್ಷ ರೂ. ವೆಚ್ಚವಾಗಲಿದೆ. 20 ಅಲಂಕೃತ ಎತ್ತಿನಗಾಡಿಗಳು ಪಾಲ್ಗೊಳ್ಳುತ್ತಿದ್ದು, ಇವರಿಗೆ ತಲಾ 5 ಸಾವಿರ ರೂ.ಗಳಂತೆ 1.50 ಲಕ್ಷ ರೂ., ತಲಾ 1 ಲಕ್ಷ ರೂ. ವೆಚ್ಚದಲ್ಲಿ 5 ಸ್ತಬ್ಧಚಿತ್ರ ಸಿದ್ಧಪಡಿಸಬೇಕಿದೆ.
ಮೆರವಣಿಗೆಯಲ್ಲಿ 5 ಸಾವಿರ ವಿದ್ಯಾರ್ಥಿ ಗಳು, 1 ಸಾವಿರ ಮಹಿಳೆಯರು ಪಾಲ್ಗೊಳ್ಳಲಿದ್ದು, ಕಲಶ ಹೊರುವ 200 ಮಹಿಳೆಯರಿಗೆ ಕನ್ನಡ ಬಾವುಟ ಹೋಲುವ ಸೀರೆ ನೀಡಲು ತೀರ್ಮಾನಿಸಲಾಗಿದೆ. ಇದಕ್ಕೆ 2 ಲಕ್ಷ ರೂ. ವೆಚ್ಚವಾಗಲಿದೆ. ಆದರೆ, ಇವುಗಳ ವೆಚ್ಚ ಭರಿಸಲು ಯಾವುದೇ ಪ್ರಾಯೋಜಕರು ಮುಂದೆ ಬರುತ್ತಿಲ್ಲ.
ಮಕ್ಕಳ ವಿಜ್ಞಾನ ಸಮ್ಮೇಳನಕ್ಕೂ ಪ್ರಾಯೋಜಕರಿಲ್ಲ
ನ. 29ರಿಂದ ಮಕ್ಕಳ ವಿಜ್ಞಾನ ಸಮಾವೇಶ ನಡೆಯುತ್ತಿದೆ. ಮಕ್ಕಳ ವಿಜ್ಞಾನ ಸಮ್ಮೇಳನಕ್ಕೆ ಸರಕಾರದಿಂದ ಯಾವುದೇ ಅನುದಾನ ದೊರೆಯುವುದಿಲ್ಲ. ಸ್ಥಳೀಯವಾಗೇ ಸಂಪ ನ್ಮೂಲ ಸಂಗ್ರಹಿಸಿ ಸಮ್ಮೇಳನ ಮಾಡಬೇಕಿದೆ. ರಾಜ್ಯಾದ್ಯಂತ 1,200 ವಿದ್ಯಾರ್ಥಿಗಳು, 200 ಮಂದಿ ಸಂಪನ್ಮೂಲ ವ್ಯಕ್ತಿಗಳು ಮೂರು ದಿನಗಳ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದು, ಒಟ್ಟಾರೆ 31 ಲಕ್ಷ ರೂ. ಅಂದಾಜು ಮಾಡ ಲಾಗಿದೆ. ಇದರಲ್ಲಿ ಆಹಾರ ವ್ಯವಸ್ಥೆಗೆ 12.50 ಲಕ್ಷ ರೂ. ವೆಚ್ಚವಾಗುತ್ತಿದೆ. ಇದಕ್ಕೂ ಪ್ರಾಯೋಜಕರು ಸಿಗುತ್ತಿಲ್ಲ.