ಪುತ್ತೂರು: ಹೆಣ್ಣು ಕನಸನ್ನು ಕಾಣುವುದರ ಜೊತೆಗೆ ಅದನ್ನು ಸಾಧಿಸುವ ಪ್ರಯತ್ನವನ್ನು ಕೂಡ ಮಾಡಬೇಕು. ಹೆಣ್ಣು ಅಬಲೆಯಲ್ಲ, ಅವಳು ಎಲ್ಲಾ ರೀತಿಯಿಂದಲೂ ಸಬಲೆಯಾಗಿದ್ದಾಳೆ, ಮಾನಸಿಕವಾಗಿ ಅವಳನ್ನು ಎಂದಿಗೂ ಸೋಲಿಸಲಾಗದು. ಅವಳ ಮನಸ್ಸು ಯಾವಾಗ ಯಾವ ರೀತಿಯ ಯೋಚನೆಯಲ್ಲಿ ಮಗ್ನವಾಗಿದೆ ಎಂದು ಊಹಿಸುವುದು ಕಷ್ಟ. ಯಾಕೆಂದರೆ ಹೆಣ್ಣಿನ ಮನಸ್ಸು ಹರಿಯುವ ನದಿಯ ಹಾಗೆ ಎಂದು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಆಂಗ್ಲ ವಿಭಾಗದ ಉಪನ್ಯಾಸಕಿ ಜಯಶ್ರೀ ನುಡಿದರು.
ಅವರು ಅಲ್ಲಿನ ವಿವೇಕಾನಂದ ಪದವಿ ಕಾಲೇಜಿನ ಮಹಿಳಾ ಘಟಕದಿಂದ ಆಯೋಜಿಸಲಾದ ಮಹಿಳಾ ಸಬಲೀಕರಣ ಎಂಬ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಬುಧವಾರ ಮಾತನಾಡಿದರು.
ಇಂದಿನ ಆಧುನಿಕ ಸಮಾಜದಲ್ಲೂ ಹೆಣ್ಣು ಶೋಷಣೆಗೆ ಒಳಪಡುತ್ತಿರುವುದು ವಿಷಾದದ ವಿಷಯ. ಆದರೆ ಇಂದು ಮಹಿಳೆಯರು ಶಿಕ್ಷಣದತ್ತ ಹೆಚ್ಚಿನ ಒಲವನ್ನು ತೋರುತ್ತಿದ್ದಾರೆ. ಹೆಣ್ಣುಮಕ್ಕಳು ಶಿಕ್ಷಣವನ್ನು ಪಡೆಯುವುದರ ಮೂಲಕ ಕುಟುಂಬವನ್ನು ಬೆಳಗುವರು. ಅದೇ ರೀತಿ ಇಂದು ಶಿಕ್ಷಣ ಸಂಸ್ಥೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಸಾಧನೆಯನ್ನು ಮಾಡುತ್ತಿದ್ದಾರೆ.
ಸ್ತ್ರೀ ದೇಶದ ಅಭಿವೃದ್ಧಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿದ್ದಾಳೆ. ಸ್ತ್ರೀ ತನ್ನ ಜೀವನದುದ್ದಕ್ಕೂ ಹಲವು ಪಾತ್ರಗಳನ್ನು ನಿರ್ವಹಿಸುತ್ತಾಳೆ, ಮಗಳಾಗಿ, ಸಹೋದರಿಯಾಗಿ, ಹೆಂಡತಿಯಾಗಿ ಅಮ್ಮನಾಗಿ ಒಂದು ಸಂಸಾರವನ್ನು ಮುನ್ನಡೆಸುತ್ತಾಳೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಂಗ್ಲ ವಿಭಾಗದ ಉಪನ್ಯಾಸಕಿ ಮೋತಿ ಬಾೈ ಮಾತನಾಡಿ ಸ್ತ್ರೀಯು ಶಕ್ತಿಯ ಇನ್ನೊಂದು ರೂಪ. ಅವಳಿಗೆ ಅಸಾಧ್ಯ ಎಂಬ ವಿಷಯ ಪ್ರಪಂಚದಲ್ಲಿ ಇಲ್ಲ. ತನ್ನ ಆಸೆಗಳನ್ನು ಮತ್ತು ನೋವುಗಳನ್ನು ತನ್ನೊಳಗಿಟ್ಟು ಕುಟುಂಬದ ಸುಖಕ್ಕಾಗಿ ತ್ಯಾಗ ಮಾಡುವವಳು ಹೆಣ್ಣು.
ಶಿಕ್ಷಣವನ್ನು ಪಡೆಯುವುದರಿಂದ ಮಹಿಳಾ ಸಬಲೀಕರಣ ಸಾಧ್ಯ. ವಿದ್ಯೆಯಿಂದ ಸಮಾಜದಲ್ಲಿ ಸ್ವತಂತ್ರವಾಗಿ ಬದುಕುವ ಧೈರ್ಯ ಹಾಗೂ ಆತ್ಮವಿಶ್ವಾಸ ದೊರೆಯುತ್ತದೆ. ವಿದ್ಯಾಭ್ಯಾಸವು ಬದುಕನ್ನು ಯಾವ ರೀತಿಯಲ್ಲಿ ಬಾಳಬೇಕೆಂಬ ದಾರಿಯನ್ನು ತೋರಿಸುತ್ತದೆ ಎಂದರು.
ನಾವು ಇಂದು ನವಯುಗದಲ್ಲಿದ್ದೇವೆ, ಸ್ತ್ರೀ ಕೂಡ ಹಳೆಯ ಕಟ್ಟುಪಾಡುಗಳಿಂದ ಹೊರಬೇಕಾದ ಅಗತ್ಯವಿದೆ.ಸಾಂಪ್ರದಾಯಿಕವಾಗಿರುವ ಜೀವನ ಶೈಲಿಗೆ ಕೆಲವೊಂದು ಆಧುನಿಕ ಅಂಶಗಳನ್ನು ಸೇರಿಸುವುಕೊಳ್ಳುವ ಅನಿವಾರ್ಯತೆಯಿದೆ. ಪುರುಷ ಪ್ರಧಾನ ಸಮಾಜದಲ್ಲಿ ಯಾವುದೇ ಭಯವಿಲ್ಲದೆ ಬದುಕುವುದು ಸ್ತ್ರೀಯ ಹಕ್ಕು. ಸಮಾಜ ಟೀಕೆಗಳಿಗೆ ಹೆದರಿ ಓಡುವುದಲ್ಲ, ಅದನ್ನು ಎದುರಿಸುವ ಕಾಲ ಸನ್ನಿಹಿತವಾಗಿದೆ ಎಂದು ಹೇಳಿದರು.
ವಿದ್ಯಾರ್ಥಿನಿ ಅಪೂರ್ವ ಪ್ರಾರ್ಥಿಸಿ, ಮಹಿಳಾ ಘಟಕದ ಸಂಯೋಜಕಿ ವಿಜಯಲಕ್ಷ್ಮೀ ಸ್ವಾಗತಿಸಿದರು. ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಅನಿತಾ ಕಾಮತ್ ವಂದಿಸಿ, ವಿದ್ಯಾರ್ಥಿನಿ ಅನಘಾ ಕಾರ್ಯಕ್ರಮ ನಿರೂಪಿಸಿದರು.