ವಾಷಿಂಗ್ಟನ್: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಮತ್ತು ಅಮೆರಿಕ ನಡುವಣ ಬಾಂಧವ್ಯ ಅರಳಿದೆ ಎಂದು ಹೇಳಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಉನ್ನತಾಧಿಕಾರಿಯೊಬ್ಬರು, ಲೋಕಸಭಾ ಚುನಾವಣೆಗಳ ನಂತರ ಉಭಯ ದೇಶಗಳ ಸಂಬಂಧ ಮತ್ತಷ್ಟು ಸುಧಾರಿಸುವ ಆಶಾಭಾವನೆಯನ್ನೂ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ಕಳೆದ ವರ್ಷ ಅಮೆರಿಕ ಮತ್ತು ಭಾರತ ನಡುವಣ ನಡೆದ ಪ್ರಥಮ ಟು ಫ್ಲಸ್ ಟು ಮಹತ್ವದ ಸಭೆಯು ಉಭಯ ದೇಶಗಳ ಸಂಬಂಧವನ್ನು ಮತ್ತಷ್ಟು ಮುನ್ನಡೆಗೆ ಕೊಂಡೊಯ್ದಿದೆ ಎಂದು ತಮ್ಮ ಹೆಸರನ್ನು ಬಹಿರಂಗಗೊಳಿಸಲು ಇಚ್ಚಿಸದ ಅಮೆರಿಕ ಸರ್ಕಾರದ ಆ ಹಿರಿಯ ಅಧಿಕಾರಿ ಹೇಳಿದ್ದಾರೆ.
ನರೇಂದ್ರ ಮೋದಿ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಭಾರತ ಮತ್ತು ಅಮೆರಿಕ ಸಂಬಂಧ ಮತ್ತಷ್ಟು ಬಲಗೊಂಡಿದೆ. 2017ರಲ್ಲಿ ಮೋದಿ ಶ್ವೇತಭವನಕ್ಕೆ ಭೇಟಿ ನೀಡಿದ ಬಳಕ ಬಾಂಧವ್ಯ ಬಲವರ್ಧನೆಯಲ್ಲಿ ಸಾಕಷ್ಟು ಪ್ರಗತಿ ಕಂಡು ಬಂದಿತು.
ಎರಡು ದೇಶಗಳ ಸಂಬಂಧ ಸದೃಢವಾಗಿ ಮುಂದುವರೆದಿರುವುದಕ್ಕೆ ಇತ್ತೀಚೆಗೆ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರ ಅಮೆರಿಕ ಭೇಟಿ ಒಂದು ನಿದರ್ಶನ ಎಂದು ಅವರು ತಿಳಿಸಿದ್ದಾರೆ.