ಲೋಕಸಭೆ ಚುನಾವಣೆ 2019ನ್ನು ಯಶಸ್ವಿಗೊಳಿಸಲು ಚುನಾವಣಾ ಆಯೋಗ ಅಪ್ಲಿಕೇಷನ್ ಒಂದನ್ನು ಜಾರಿಗೆ ತಂದಿದೆ. ಈ ಅಪ್ಲಿಕೇಷನ್ ವಿಶೇಷ ಮತದಾರರ ಜೊತೆ ಅದೃಷ್ಟ ಪರೀಕ್ಷೆಗೆ ಚುನಾವಣಾ ಕಣಕ್ಕಿಳಿದಿರುವವರಿಗೂ ಸಾಕಷ್ಟು ಪ್ರಯೋಜನ ನೀಡಲಿದೆ.
ಇದೊಂದು ವಿಶೇಷ ಆಪ್ ಆಗಿದ್ದು, ದಿವ್ಯಾಂಗರನ್ನು ಗಮನದಲ್ಲಿಟ್ಟುಕೊಂಡು ಇದನ್ನು ಸಿದ್ಧಪಡಿಸಲಾಗಿದೆ. ಈ ಆಪ್ ಹೆಸ್ರು ಪಿಡಬ್ಲ್ಯೂಡಿ. ಹೆಸರು ನೋಂದಣಿ, ವಿಳಾಸ ಬದಲಾವಣೆಗೆ ಈ ಆಪ್ ಬಳಸಬಹುದು. ಮೊದಲ ಬಾರಿ ಮತ ಚಲಾವಣೆ ಮಾಡುವವರು ಹೆಸರು, ಮೊಬೈಲ್ ನಂಬರ್, ವಿಳಾಸ, ಜಿಲ್ಲೆ, ರಾಜ್ಯ, ಲೋಕಸಭೆ ಕ್ಷೇತ್ರದ ಹೆಸರನ್ನು ನಮೂದಿಸಬೇಕು.
ಎಲ್ಲ ದಾಖಲೆಗಳನ್ನು ಹಾಕಿದ ಮೇಲೆ ಬೂತ್ ಮಟ್ಟದ ಅಧಿಕಾರಿಗಳು ದಿವ್ಯಾಂಗರಿಗೆ ನೆರವಾಗಲಿದ್ದಾರೆ. ಅವ್ರ ಮನೆಗೆ ಬಂದು ಮತಗಟ್ಟೆಗೆ ಕರೆದೊಯ್ಯಲಿದ್ದಾರೆ. ಜೊತೆಗೆ ದಿವ್ಯಾಂಗರು ಗಾಲಿಕುರ್ಚಿ ವ್ಯವಸ್ಥೆಗೆ ಮನವಿ ಸಲ್ಲಿಸಬಹುದು.
ಗೂಗಲ್ ಪ್ಲೇ ಸ್ಟೋರ್ ಮೂಲಕ ಈ ಆಪ್ ಡೌನ್ಲೋಡ್ ಮಾಡಿಕೊಳ್ಳಬಹುದು. ಪಿಡಬ್ಲ್ಯೂಡಿ ಆಯಪ್, ಮತಗಟ್ಟೆ ಹಾಗೂ ಅಲ್ಲಿನ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಲಿದೆ. ದಿವ್ಯಾಂಗರಿಗೆ ಉಚಿತವಾಗಿ ಮತಗಟ್ಟೆಗೆ ಹೋಗುವ ಸೌಲಭ್ಯ ಇದ್ರಿಂದ ಸಿಗಲಿದೆ.