ಕಲ್ಲಡ್ಕ: ಶ್ರೀರಾಮ ಶಿಶುಮಂದಿರ ಕಲ್ಲಡ್ಕದಲ್ಲಿ ಮಾತೆಯರ ಪಾದಪೂಜೆ ಮತ್ತು ಮಾರ್ಚ್, ಎಪ್ರಿಲ್, ಮೇ ತಿಂಗಳಲ್ಲಿ ಹುಟ್ಟಿದ ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ನಡೆಯಿತು.
ಮಕ್ಕಳಿಗೆ ತಾಯಂದಿರ ಕೇವಲ ಪಾದಗಳು ಮಾತ್ರ ಕಾಣುವ ರೀತಿಯಲ್ಲಿ ಪರದೆಯನ್ನು ಕಟ್ಟಲಾಗಿತ್ತು. ಪುಟಾಣಿಗಳು ತಮ್ಮ ತಮ್ಮ ಅಮ್ಮನ ಪಾದವನ್ನೇ ನೋಡಿ ಗುರುತಿಸಿ ಅದರ ಪಕ್ಕದಲ್ಲಿ ಕುಳಿತು ಕೊಳ್ಳುತ್ತಿದ್ದರು. ನಂತರ ಪರದೆಯನ್ನು ಬಿಚ್ಚಲಾಗಿತ್ತು.
ಎಲ್ಲಾ ಪುಟಾಣಿಗಳು ಅವರ ಅಮ್ಮನ ಪಾದಗಳಿಗೆ ನೀರು ಹಾಕಿ ಅರಶಿನ ಕುಂಕುಮ ಹಚ್ಚಿ ಪುಷ್ಪವನ್ನು ಅರ್ಪಿಸಿ ಪಾದಪೂಜೆ ಮಾಡಿದರು. ಎಲ್ಲಾ ಪುಟಾಣಿಗಳು ಅವರವರ ಅಮ್ಮನ ಪಾದವನ್ನು ಸರಿಯಾಗಿ ಗುರುತಿಸಿದ್ದು ವಿಶೇಷವಾಗಿದೆ. ತುಂಬಾ ಸಂತೋಷದಿಂದ ಮಾತೆಯರು ಹಾಗೂ ಪುಟಾಣಿಗಳು ಈ ಪಾದಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ನಂತರ ಹುಟ್ಟುಹಬ್ಬ ಆಚರಿಸುವ ಮಕ್ಕಳಿಗೆ ಆರತಿ ಎತ್ತಿ, ತಿಲಕ ಇಟ್ಟು, ಅಕ್ಷತೆ ಹಾಕಿ, ಸಿಹಿಯನ್ನು ನೀಡಿ ಮಾತೆಯರು ಶುಭ ಹಾರೈಸಿ ೫೨ ಮಕ್ಕಳ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ವಸಂತ ಮಾಧವ ಶ್ರೀಮಾನ್, ನಾಗೇಶ್ ಕಲ್ಲಡ್ಕ ಹಾಗೂ ಡಾ|| ಕಮಲಾ ಭಟ್ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 141 ಮಾತೆಯರು ಭಾಗವಹಿಸಿದರು.
ಕಾರ್ಯಕ್ರಮವನ್ನು ವಿದ್ಯಾ ಸ್ವಾಗತಿಸಿ, ರೋಹಿಣಿ ಅಶೋಕ್ ವಂದಿಸಿ, ಶ್ರೀಮತಿ ಪರಿಮಳ ನಿರೂಪಿಸಿದರು.