ಮತ್ತೆ ಮೋದಿಯವರನ್ನು ಪ್ರಧಾನ ಮಂತ್ರಿ ಆಗುವಂತೆ ಮಾಡುವುದು ನಮ್ಮ ಕರ್ತವ್ಯ: ರೂಪಾಲಿ ನಾಯ್ಕ – ಕಹಳೆ ನ್ಯೂಸ್
ಕಾರವಾರ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಂಕೋಲಾ ತಾಲೂಕಿನ ಶಿರಗುಂಜಿ, ಹೊನ್ನಳ್ಳಿ, ಅಗಸೂರಿನ ಸರಳೆಬೈಲ್, ವಾಸರೆ, ವಾಸರಕುದ್ರಿಗಿಯ ಕೋಡ್ಸಣಿ, ಸುಂಕಸಾಳದ ಹೆಬ್ಬುಳ ಬಿಜೆಪಿ ಬೂತ್ ಕಮಿಟಿ ಕಾರ್ಯಕರ್ತರ ಸಭೆಯನ್ನು ಕಾರವಾರ- ಅಂಕೋಲಾ ಶಾಸಕಿ ರೂಪಾಲಿ ನಾಯ್ಕ ಅವರು ಭಾನುವಾರ ಕೈಗೊಂಡರು.
ಈ ವೇಳೆ ಮಾತನಾಡಿದ ಅವರು, “ಸುಳ್ಳು ಭರವಸೆಗಳನ್ನು ಕೊಟ್ಟು ಹೋಗುವವಳು ನಾನಲ್ಲ. ಈ ಐದು ವರ್ಷಗಳಲ್ಲಿ ಏನೂ ಸಾಧನೆ ಮಾಡದೇ ನಿಮ್ಮ ಮುಂದೆ ಮತ್ತೆ ಮತ ಕೇಳಲು ನಾನು ಬರುವುದಿಲ್ಲ. ನನ್ನ ಮೇಲೆ ಭರವಸೆ ಇಟ್ಟು ನನಗೆ ಆಶೀರ್ವಾದ ಮಾಡಬೇಕು. ಹಾಗೆಯೇ, ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕು. ಇದು ದೇಶಕ್ಕಾಗಿ ಇರುವ ಚುನಾವಣೆ.
ಪ್ರಧಾನಿ ನರೇಂದ್ರ ಮೋದಿಯವರು ಕಡುಬಡವರಿಗಾಗಿ, ಗ್ರಾಮೀಣ ಭಾಗದವರಿಗಾಗಿ ಅನೇಕ ಯೋಜನೆಗಳನ್ನು ತಂದು, ಎಲ್ಲರ ಬಾಳು ಹಸನಾಗಿಸಿದ್ದಾರೆ. ಈ ಯೋಜನೆಗಳ ಸದುಪಯೋಗವನ್ನು ಬೂತ್ ಕಮಿಟಿ, ಪೇಜ್ ಪ್ರಮುಖರು ಹಾಗೂ ಶಕ್ತಿ ಕೇಂದ್ರದ ಸದಸ್ಯರು ಮೊದಲು ಪಡೆದುಕೊಂಡಿರಬೇಕು. ನಾವು ಪಡೆದರೆ ಮಾತ್ರ ಅದನ್ನು ಇನ್ನುಳಿದ ಜನರಿಗೆ ತಲುಪಿಸಲು ಸಾಧ್ಯ. ಬಿಜೆಪಿಯಲ್ಲಿ ಕಾರ್ಯಕರ್ತರಿಗೇ ಮೊದಲ ಆದ್ಯತೆ. ನನ್ನ ಮನೆ ಯಾವಾಗಲೂ ತೆರೆದಿರುತ್ತದೆ.
ತಮ್ಮ ಸಮಸ್ಯೆಗಳು ಏನೇ ಇದ್ದಲ್ಲಿ ಸ್ವತಃ ನನ್ನನ್ನು ಅಥವಾ ನನ್ನ ಸಹಚರರನ್ನು ಭೇಟಿಯಾಗಿ ತಿಳಿಸಿ. ಅದಕ್ಕೆ ಪರಿಹಾರ ಕಂಡುಕೊಡುವುದು ನನ್ನ ಕೆಲಸ” ಎಂದರು. ಕ್ಷೇತ್ರದಲ್ಲಿ ನಮ್ಮ ಅನಂತಕುಮಾರ ಹೆಗಡೆರವರ ಮಹತ್ವ ಏನು ಎಂಬುದು ಕ್ಷೇತ್ರದ ಪ್ರಜ್ಞಾವಂತ ಜನತೆಗೆ ತಿಳಿದಿದೆ. ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನ ಮಂತ್ರಿ ಆಗುವಂತೆ ಮಾಡುವುದು ನಮ್ಮ ಕರ್ತವ್ಯ ಎಂದರು.