ಕಾಂಚೀ ಕಾಮಕೋಟಿ ಮಠದ ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ವಿಜಯೇಂದ್ರ ಸರಸ್ವತಿ ಮಹಾಸ್ವಾಮಿಗಳು ಹಾಗೂ ಶ್ರೀಗೋಕರ್ಣ ಸಂಸ್ಥಾನ ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಕಾಂಚೀಮಠದಲ್ಲಿ ಭೇಟಿಮಾಡಿ ಮಾತುಕತೆ ನಡೆಸಿದರು.
ಕಾಂಚೀ ಶಂಕರಾಚಾರ್ಯರ ವಿಶೇಷ ನಿಯಂತ್ರಣದ ಮೇರೆಗೆ ಕಾಂಚೀಪುರಂನಲ್ಲಿರುವ ಮಠಕ್ಕೆ ಭೇಟಿ ನೀಡಿದ ಶ್ರೀರಾಮಚಂದ್ರಾ ಪುರ ಮಠದ ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳನ್ನು ಕಾಂಚೀ ಮಠದಿಂದ ವಿಶೇಷವಾಗಿ ಗೌರವಿಸಿ ಸ್ವಾಗತಿಸಿದರು .
ಆನಂತರ ಪೂಜ್ಯ ಶ್ರೀಗಳು ಕಾಂಚೀ ಮೀನಾಕ್ಷಿ ದೇವಿಗೆ ವಿಶೇಷ ಫಲಪಂಚಾಂಮೃತಾಭಿಷೇಕವನ್ನು ನೆರವೇರಿಸಿ, ಕಂಚಿಯ ಬ್ರಹ್ಮೈಕ್ಯ ಪರಮಾಚಾರ್ಯರು ಹಾಗೂ ಬ್ರಹ್ಮೈಕ್ಯ ಜಯೇಂದ್ರ ಸರಸ್ವತಿಗಳ ವೃಂದಾವನವನ್ನು ಸಂದರ್ಶಿಸಿದರು.
ಆನಂತರ ಕಾಂಚೀ ಹಾಗೂ ಶ್ರೀರಾಮಚಂದ್ರಾಪುರಮಠ ಉಭಯ ಶಂಕರಪೀಠಗಳ ಸಮಾಗಮ ನಡೆಯಿತು. ಈ ಸಂದರ್ಭದಲ್ಲಿ ಧರ್ಮ ಸಂರಕ್ಷಣೆ ಹಾಗೂ ಅನೇಕ ಸಮಕಾಲೀನ ವಿದ್ಯಮಾನಗಳ ಕುರಿತಾಗಿ ಗಂಟೆಗೂ ಅಧಿಕ ಕಾಲ ಪರಸ್ಪರ ಮಹತ್ತರ ವಿಚಾರ ವಿನಿಮಯ ನಡೆದವು. ಭೇಟಿಯಬಗ್ಗೆ ಹರ್ಷ ವ್ಯಕ್ತಪಡಿಸಿದ ಕಾಂಚೀ ಶಂಕರಾಚಾರ್ಯರು ” ನಮ್ಮ ಈ ಭೇಟಿ ಧರ್ಮ-ಧರ್ಮಗಳ ಸಮ್ಮಿಲನದಂತಾಗಿದ್ದು ಧರ್ಮ ಬೆಳವಣಿಗೆಗೆ ಕಾರಣವಾಗುವಂತಾಗಿದೆ.
ನಮ್ಮ ಮಠಗಳ ನಡುವೆ ಪರಂಪರೆಗತವಾಗಿ ಮೊದಲಿಂದಲೂ ಇದ್ದ ವಿಶ್ವಾಸ – ಒಡನಾಟಗಳು ಮತ್ತಷ್ಟು ವೃದ್ಢಿಸುವಂತಾಗಿದೆ.
ನಿಮ್ಮ ಎಲ್ಲಾ ಕಾರ್ಯಗಳ ಜೊತೆಗೆ ಕಾಂಚೀ ಮಠದ ಸಂಪೂರ್ಣ ಸಹಕಾರ ಸದಾ ಇರಲಿದೆ” ಎಂದರು. ಈ ಕುರಿತಾಗಿ ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಟ್ವೀಟ್ ಮಾಡಿ ಹರ್ಷವ್ಯಕ್ತಪಡಿಸಿದರು.