ಪಾಕ್ ಯುದ್ಧ ವಿಮಾನ ಹೊಡೆದುರುಳಿಸಿದ ಭಾರತದ ಹೆಮ್ಮೆಯ ಪುತ್ರ, ವಾಯುದಳದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ತಮ್ಮ ಕೆಲಸಕ್ಕೆ ಹಿಂದಿರುಗಿದ್ದಾರೆ.
ಶ್ರೀನಗರದಲ್ಲಿರುವ ವಾಯುದಳಕ್ಕೆ ಕರ್ತವ್ಯಕ್ಕೆ ಹಾಜರಾಗಿರುವ ಬಗ್ಗೆ ಅಧಿಕಾರಿಗಳು ಪ್ರಕಟಿಸಿದ್ದಾರೆ. ಫೆ.27 ರಂದು ಪಾಕಿಸ್ಥಾನದ ಎಫ್-16 ಯುದ್ದ ವಿಮಾನವನ್ನು ಬೆನ್ನಟ್ಟಿ ಪಾಕ್ ದೇಶದಲ್ಲಿ ಬಂಧಿತರಾದ ಅಭಿನಂದನ್ ವರ್ಧಮಾನ್ ಎರಡು ದಿನದ ನಂತರ ಪಾಕಿಸ್ಥಾನದಿಂದ ಬಿಡುಗಡೆ ಹೊಂದಿದ್ದರು.
ಭದ್ರತಾ ಏಜೆನ್ಸಿಗಳು ಎರಡು ವಾರಗಳ ತನಿಖೆಗೊಳಪಡಿಸಿದ ನಂತರ ಪೈಲಟ್ ವರ್ಧಮಾನ್ 12 ದಿನಗಳ ಕಾಲ ಮಾತ್ರ ತಮ್ಮ ಕುಟುಂಬದೊಂದಿಗೆ ಕಳೆದಿದ್ದಾರೆ.
ಘಟನೆ ನಡೆದ ಒಂದು ತಿಂಗಳ ಕಾಲ ಅಭಿನಂದನ್ ಗೆ ಅನಾರೋಗ್ಯದ ರಜೆ ನೀಡಲಾಯಿತು. ಆದರೆ ತಮ್ಮ ರಜೆಯ ದಿನಗಳಲ್ಲಿಯೂ ಸಹ ಅಭಿನಂದನ್ ಶ್ರೀನಗರದ ವಾಯುದಳದಲ್ಲಿಯೇ ಹೆಚ್ಚು ಕಾಲ ಕಳೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.