ಪುತ್ತೂರು: ಬ್ಯಾಂಕ್ ಎಂಬುವುದು ಜನರ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇಂದಿನ ದಿನಗಳಲ್ಲಿ ಬ್ಯಾಂಕ್ ಸೌಲಭ್ಯಗಳು ಅತ್ಯಂತ ಸುಲಭ ರೀತಿಯಲ್ಲಿ ದೊರಕುತ್ತಿದೆ. ಇದಕ್ಕೆ ಪ್ರಮುಖ ಕಾರಣ ಆಧುನಿಕ ತಂತ್ರಜ್ಞಾನಗಳ ಆವಿಷ್ಕಾರ. ಪ್ರಸ್ತುತ ಜಗತ್ತಿನಲ್ಲಿ ಬ್ಯಾಂಕಿಂಗ್ ಎಂಬುದು ಮನುಷ್ಯನ ಅಂಗೈಯಲ್ಲಿ ನಿಭಾಯಿಸುವಂತಹ ಸಾಧನವಾಗಿ ಮಾರ್ಪಟ್ಟಿದೆ ಎಂದು ಪುತ್ತೂರಿನ ನೆಹರೂನಗರದ ಕೆನರಾ ಬ್ಯಾಂಕ್ ಮ್ಯಾನೇಜರ್ ಮೃದುಲಾ ಮೋಹನ್ ತಿಳಿಸಿದರು.
ಅವರು ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಆಯೋಜಿಸಲ್ಪಟ್ಟ “ಬ್ಯಾಂಕಿಂಗ್ ಮತ್ತು ಶೇರು ಮಾರುಕಟ್ಟೆಗಳ ಪ್ರಸ್ತುತ ಬೆಳವಣಿಗೆ” ಎಂಬ ವಿಷಯದ ಕುರಿತಾದ ಸರ್ಟಿಫಿಕೆಟ್ ಕೋರ್ಸ್ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಇಂದು ಪ್ರತಿಯೊಬ್ಬರು ತಮ್ಮತಮ್ಮ ಮನೆಯಲ್ಲೇ ಕುಳಿತು ಬ್ಯಾಂಕಿಂಗ್ ಸೌಲಭ್ಯಗಳನ್ನು ನಿರ್ವಹಿಸಬಹುದಾಗಿದೆ. ಇದರಿಂಗಾಗಿ ಗಂಟೆಗಟ್ಟಲೆ ಕುಳಿತು ಮಾಡುತಿದ್ದಂತಹ ಕಾರ್ಯಗಳು ಕೇವಲ ಕೆಲವೇ ಕ್ಷಣಗಳಿಗೆ ಸೀಮಿತವಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಡಿಜಿಟಲೈಜೇಶನ್ ಎಂಬುದು ಬಿಡುವಿಲ್ಲದೇ ಸಾಗುತ್ತಲೇ ಇದೆ.
ಇಲ್ಲಿ ಕೇವಲ ಅನುಕೂಲತೆಗಳು ಮಾತ್ರವಲ್ಲ ಅನನುಕೂಲತೆಗಳ ಕೊರತೆಯೂ ಹೆಚ್ಚಾಗಿವೆ. ಹಾಗಾಗಿ ಯುವಜನತೆ ಈ ಕುರಿತಾಗಿ ಎಚ್ಚರಿಯನ್ನು ವಹಿಸಬೇಕು. ಜೊತೆಗೆ ಆಧುನಿಕ ತಂತ್ರಜ್ಞಾನಗಳನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಈ ಸಂದರ್ಭ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮಾಹಿತಿ ಪುಸ್ತಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ. ಶಂಕರ್‍ನಾರಾಯಣ ಭಟ್ ಮಾತನಾಡಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರತಿಯೊಬ್ಬರಿಗೂ ಕಲಿಯುಲು ಸಾಕಷ್ಟಿದೆ. ಇಂದಿನ ದಿನಗಳಲ್ಲಿ ಬ್ಯಾಂಕಿಂಗ್ ವ್ಯವಹಾರಗಳು ಬಹಳ ಸರಳ ಹಾಗೂ ಪ್ರತಿಯೊಬ್ಬರಿಗೂ ಅನುಕೂಲಕವಾಗಿದೆ.
ಇದರಿಂದಾಗಿ ವ್ಯಾಪಾರ-ವಹಿವಾಟುಗಳು ಕೂಡಾ ಅಷ್ಟೇ ಸುಲಭವಾಗಿದೆ. ನಾಲ್ಕು ಗೋಡೆಗಳ ನಡುವೆ ಕುಳಿತು ವ್ಯವಹಾರಗಳನ್ನು ನಿರ್ವಹಿಸುವ ಸಮಾಜ ಇಂದು ಸೃಷ್ಟಿಯಾಗುತ್ತಿರುವುದು ಆಧುನಿಕ ಜಗತ್ತಿನ ಕೊಡುಗೆ. ಹಾಗಾಗಿ ವಿದ್ಯಾರ್ಥಿಗಳು ಈ ಕುರಿತಾದ ಮಾಹಿತಿಗಳನ್ನು ಕಲೆ ಹಾಕಿಕೊಂಡು ಸಾಗಿದಲ್ಲಿ ಭವಿಷ್ಯದ ಹಾದಿಗೆ ಪೂರಕವಾಗುತ್ತದೆ ಎಂದು ತಿಳಿಸಿದರು.
ಕಾಲೇಜಿನ ಸ್ನಾತಕೋತ್ತರ ವಿಭಾಗದ ಸಂಯೋಜಕಿ ಡಾ. ವಿಜಯ ಸರಸ್ವತಿ ಪ್ರಸ್ತಾವನೆಗೈದು ಸ್ವಾಗತಿಸಿದರು. ಉಪನ್ಯಾಸಕ ವರ್ಷಿತ್ ವಂದಿಸಿ, ಉಪನ್ಯಾಸಕಿ ಅನನ್ಯ ವಿ. ಕಾರ್ಯಕ್ರಮ ನಿರೂಪಿಸಿದರು.