ಪುತ್ತೂರು: ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಪ್ರತಿಭೆಯ ಬೆಳವಣಿಗೆ ಸಾಧ್ಯ. ಕಾರ್ಯಕ್ರಮಗಳ ಆಯೋಜನೆ ಮಾಡುವುದು ಸಾಂಘಕ ಶಕ್ತಿ ಹಾಗೂ ನಿರ್ವಹಣೆಯ ಪ್ರಾಯೋಗಿಕ ಅನುಭವ ದೊರೆಯುತ್ತದೆ. ಜನರೊಂದಿಗೆ ಬೆರೆಯುವ ಬಗೆಯನ್ನು ಕಲಿತು, ಖುಷಿಯನ್ನು ಹಂಚುವ ಮುಖ್ಯ ವೇದಿಕೆ ಈ ಸ್ಪರ್ಧೆಗಳು ಎಂದು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀನಿವಾಸ್ ಪೈ ಹೇಳಿದರು.
ಅವರು ಕಾಲೇಜಿನ ಸ್ನಾತಕೋತ್ತರ ರಸಾಯನ ಶಾಸ್ತ್ರ ವಿಭಾಗ ಆಯೋಜಿಸಿದ ‘ಶೋಧನಾ’ ಅಂತರ್ ಕಾಲೇಜು ಸ್ಪರ್ಧೆಯನ್ನು ಉದ್ಘಾಟಿಸಿ ಬುಧವಾರ ಮಾತನಾಡಿದರು.
ಜೀವನದಲ್ಲಿ ಗೆಲುವು ಹಾಗೂ ಸೋಲಿಗಿಂತಲೂ ಭಾಗವಹಿಸುವಿಕೆ ಪ್ರಮುಖವಾಗುತ್ತದೆ. ಈ ಅನುಭವದ ಪಾಠ ಭವಿಷ್ಯದ ಗೆಲುವಿಗೆ ಅಡಿಪಾಯ. ಇತರರಿಗೆ ಸಹಾಯ ಮಾಡಿ ತಮ್ಮೊಂದಿಗೆ ತಮ್ಮ ಸಂಗಡಿಗರಿಗೂ ತಮ್ಮ ಹಾದಿಯಲ್ಲಿ ಬೆಳೆಯಲು ಕೈಲಾದ ಸಹಾಯ ಮಾಡಿ. ಕೊನೆಗೆ ಗೆಲ್ಲುವುದು ಒಗ್ಗಟ್ಟು. ಸಾಂಘಿಕ ಪ್ರಯತ್ನವಿದ್ದಾಗ ಸೋಲು ಎನ್ನುವುದು ಸೋತು ಸುಣ್ಣವಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಕೃಷ್ಣ ಕಾರಂತ್ ಮಾತನಾಡಿ, ಸ್ಪರ್ಧೆಗಳೆಂದ ಕೂಡಲೆ ಇನ್ನೊಬ್ಬರನ್ನು ನಾವು ಸೋಲಿಸಬೇಕು ಎನ್ನುವುದಕ್ಕಿಂತಲೂ ನಾವು ಗೆಲ್ಲಬೇಕು ಎನ್ನುವ ಬಾವನೆ ಬೆಳೆಯಬೇಕು. ಜೀವನವೆಂದಾಗ ಇನ್ನೊಬ್ಬರನ್ನು ತುಳಿದು ಮೇಲೇರುವುದಲ್ಲ. ಜೀವನದಲ್ಲಿ ಸಾಮರಸ್ಯ ವಿರಬೇಕು ಎಂದಾದರೆ ನಮ್ಮ ಸುತ್ತಲಿನ ಜನರೊಡನೆ ಸಾಮರಸ್ಯ ಬೆಳೆಸಬೇಕು. ಸಾಂಘಿಕ ಶಕ್ತಿ ಹಾಗೂ ಪ್ರಯತ್ನ ಗೆಲುವಿನ ಮೂಲ ಮಂತ್ರ ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶೋಧನ ಎಂದರೆ ಅನ್ವೇಷಣೆ. ನಮ್ಮೊಳಗಿನ ಪ್ರತಿಭೆಯನ್ನು ಮೊದಲು ನಾವು ಗುರುತಿಸಿಕೊಳ್ಳಬೇಕು. ಅದಕ್ಕಾಗಿ ದೊರಕುವ ಪ್ರತಿ ಅವಕಾಶವನ್ನೂ ಅತ್ಯಂತ ಸಮರ್ಥವಾಗಿ ಉಪಯೋಗಿಸಿಕೊಳ್ಳಬೇಕು. ಈ ಅವಕಾಶಗಳು ಜೀವನದಲ್ಲಿ ನಮಗೆ ಉನ್ನತ ಸ್ಥಾನವನ್ನು ಪಡೆಯಲು ಸಹಾಯ ಮಾಡುತ್ತವೆ. ಗುರಿ ಇನ್ನೊಬ್ಬರನ್ನು ಮೆಟ್ಟಿ ಮುನ್ನಡೆಯುವ ಕಡೆಗಿರದೆ ನಾವು ಯಾವರೀತಿ ಯಶಸ್ವಿಯಾಗಬಹುದು ಎನ್ನುವುದರತ್ತ ಇರಲಿ ಎಂದು ನುಡಿದರು.
ಈ ಸಂದರ್ಭ ಕಾಲೇಜಿನ ಐಕ್ಯುಎಸಿ ಸಂಯೋಜಕ ಡಾ. ಶ್ರೀಧರ್ ಹೆಚ್.ಜಿ., ‘ಶೋಧನಾ’ ವಿದ್ಯಾರ್ಥಿ ಸಂಯೋಜಕ ಅಭಿಲಾಷ್ ಆಳ್ವ ಉಪಸ್ಥಿತರಿದ್ದರು.
ಸ್ನಾತಕೋತ್ತರ ರಸಾಯನ ಶಾಸ್ತ್ರ ವಿಭಾಗದ ಸಂಯೋಜಕ ಡಾ. ವಿಜಯ ಗಣಪತಿ ಕಾರಂತ್ ಪ್ರಸ್ತಾವನೆಗೈದರು. ವಿದ್ಯಾರ್ಥಿಗಳಾದ ವಿನಯಶ್ರೀ ಮತ್ತು ತಂಡದವರು ಪ್ರಾರ್ಥಿಸಿ, ಸಾಯಿಶ್ರೀಲತಾ ಸ್ವಾಗತಿಸಿದರು. ದೀಪಾ ವಂದಿಸಿ, ಭೂಮಿಕಾ ಕಾರ್ಯಕ್ರಮ ನಿರೂಪಿಸಿದರು.