ಕ್ರಿಮಿನಲ್ ಪ್ರಕರಣದ ಸಾಕ್ಷಿ ನಾಶಕ್ಕೆ ಯತ್ನ | ಸುದ್ದಿ ಬಿಡುಗಡೆ ಲೋಕಲ್ ಪತ್ರಿಕೆಯ ಸಿಬ್ಬಂದಿ ಮೇಲೆ ಜಾಮೀನು ರಹಿತ ಪ್ರಕರಣ
ಪುತ್ತೂರು : ಸುದ್ದಿ ಬಿಡುಗಡೆ ಪತ್ರಿಕೆಯ ಮೂವರು ಸಿಬ್ಬಂದಿಗಳ ಮೇಲೆ ಪುತ್ತೂರು ನಗರ ಠಾಣೆಯಲ್ಲಿ ಜಾಮೀನು ರಹಿತ ಪ್ರಕರಣ ದಾಖಲಾಗಿದೆ. ಕ್ರಿಮಿನಲ್ ಪ್ರಕರಣವೊಂದರಲ್ಲಿ ಸಾಕ್ಷಿದಾರರಾಗಿರುವ ಪತ್ರಕರ್ತರೊಬ್ಬರಿಗೆ ಸಾಕ್ಷಿ ಹಿಂತೆಗೆಯುವಂತೆ ಒತ್ತಡ ಹಾಕಿದಕ್ಕೆ ಈ ಪ್ರಕರಣ ದಾಖಲಾಗಿದೆ. 7 ವರ್ಷ ಗರಿಷ್ಠ ಶಿಕ್ಷೆಗೆ ಒಳಗಾಗಬಹುದಾದ ಸುದ್ದಿ ಬಿಡುಗಡೆ ಪತ್ರಿಕೆಯ ಈ ಆರೋಪಿ ಸಿಬ್ಬಂದಿಗಳು, ಇದೀಗ ಬಂಧನ ಭೀತಿಯನ್ನು ಎದುರಿಸುತ್ತಿದ್ದಾರೆ.
ಸರ್ಕಲ್ ಇನ್ಸ್ ಪೆಕ್ಟರಿಗೆ ತನಿಖೆಯ ನೇತೃತ್ವ ವಹಿಸಲು ಆದೇಶ
ಪುತ್ತೂರು ತಾಲೂಕು ಬಲ್ನಾಡು ನಿವಾಸಿ ಪುತ್ತೂರು ಪತ್ರಕರ್ತರ ಸಂಘದ ಸದಸ್ಯರಾದ ಪ್ರಸಾದ್ ಬಲ್ನಾಡ್ ರವರಿಗೆ ಸುದ್ದಿಬಿಡುಗಡೆಯ 26 ಮಂದಿಯ ವಿರುದ್ದ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣದಲ್ಲಿ ಸಾಕ್ಷ ಹೇಳುವುದನ್ನು ತಡೆಯುವ ಪ್ರಯತ್ನವನ್ನು ಮೂವರು ಆರೋಪಿ ಸಿಬ್ಬಂದಿಗಳು ನಡೆಸಿದಕ್ಕಾಗಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಅವರು ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿದ ಮಾನ್ಯ ನ್ಯಾಯಾಲಯ ಪುತ್ತೂರು ನಗರ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಖುದ್ದು ತನಿಖೆಯ ನೇತೃತ್ವ ವಹಿಸುವಂತೆ ಆದೇಶಿಸಿತ್ತು.
ಇದೀಗ ಪುತ್ತೂರು ನಗರ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಅವರು ಸುದ್ದಿ ಬಿಡುಗಡೆಯ ಮೂವರು ಸಿಬ್ಬಂದಿಗಳಾದ ವರದಿಗಾರ ಲೋಕೇಶ್ ಬನ್ನೂರು , ಶೇಕ್ ಜೈನುದ್ದೀನ್ ಹಾಗೂ ನಾರಾಯಣ ಅಮ್ಮುಂಜೆ ಅವರ ವಿರುದ್ಧ FIR ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಮೂವರು ಆರೋಪಿ ಸಿಬ್ಬಂದಿಗಳನ್ನು ಪೊಲೀಸರು ಯಾವುದೇ ಕ್ಷಣದಲ್ಲಿ ಬಂಧಿಸುವ ಸಾಧ್ಯತೆ ಇದ್ದು ಆರೋಪಿಗಳು ಬಂಧನ ಭೀತಿ ಎದುರಿಸುತ್ತಿದ್ದಾರೆ.
7 ವರ್ಷ ಕಠಿಣ ಶಿಕ್ಷೆಯ ಆರೋಪ
ಸಾಕ್ಷಿ ನಾಶ ಎಂಬುವುದು ಗುರುತರ ಕ್ರಿಮಿನಲ್ ಪ್ರಕರಣವಾಗಿದ್ದು , ಸಾಕ್ಷಿಗಳ ಮೇಲೆ ಪ್ರಭಾವ ಬೀರುವುದು ಭಾರತೀಯ ದಂಡ ಸಂಹಿತೆಯ ಪ್ರಕಾರ ಕ್ರೈಂ ಆಗಿರುತ್ತದೆ. ಇದಕ್ಕೆ ನ್ಯಾಯಾಲಯವು 7 ವರ್ಷಗಳ ವರೆಗೆ ಕಠಿಣ ಶಿಕ್ಷೆ ವಿಧಿಸಬಹುದು. ದುರುದಾರರು ಸಲ್ಲಿಸಿದ ಪೂರಕ ಸಾಕ್ಷಿಯನ್ನು ಪರಿಗಣಿಸಿ ಮಾನ್ಯ ನ್ಯಾಯಾಲಯವು ಇಂತಹಾ ಸುದೀರ್ಘ ಶಿಕ್ಷೆಯನ್ನು ವಿಧಿಸಬಹುದಾಗಿದೆ.
ದೂರಿನಲ್ಲಿ ಏನಿದೆ?
ಮಾನ್ಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯ ಮತ್ತು ಎ.ಸಿ.ಜೆ.ಎಂ ನ್ಯಾಯಾಲಯ ಪುತ್ತೂರು ಇಲ್ಲಿ ಸುದ್ದಿ ಬಿಡುಗಡೆ ದಿನಪತ್ರಿಕೆಯ 26 ಜನರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ143,147,504,506,342,149 ರಡಿ ಪ್ರದೀಪ್ ಕುಮಾರ್ ಶೆಟ್ಟಿ ಪುತ್ತೂರಿನ ವಾರ್ತಾಭವನದಲ್ಲಿ ಪತ್ರಿಕಾಗೋಷ್ಠಿ ಮುಗಿಸಿ ವಾಪಸು ಬರುತಿದ್ದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಪ್ರಯತ್ನಿಸಿದ್ದಾರೆ ಎಂಬುದಾಗಿ ಖಾಸಗಿ ಪಿರ್ಯಾದಿ ದಾಖಲಿಸಿದ್ದರು. ಇದರಲ್ಲಿ ಸುದ್ದಿಬಿಡುಗಡೆಯ ಮೂವರು ವರದಿಗಾರರಾದ ನಾರಾಯಣ ಅಮ್ಮಂಜ, ಲೋಕೆಶ್ ಬನ್ನೂರು ಮತ್ತು ಶೇಕ್ ಜೈನುದ್ದೀನ್ ಇವರು 8, 13, 15ನೇ ಆರೋಪಿಗಳಾಗಿದ್ದಾರೆ. ಆ ಪ್ರಕರಣದಲ್ಲಿ ಪ್ರಸಾದ್ ಬಲ್ನಾಡು ಸಾಕ್ಷಿದಾರನಾಗಿರುತ್ತಾರೆ. ಅವರು ಸತ್ಯ ಪ್ರಮಾಣಿಕೃತವಾಗಿ ನ್ಯಾಯಾಲಯದಲ್ಲಿ ಸಾಕ್ಷ್ಯವನ್ನು ನುಡಿದಿದ್ದರು. ಆದರೆ ಅವರು ನುಡಿದಿರುವ ಸಾಕ್ಷ್ಯದ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿ ಈ ಮೂವರು ಆರೋಪಿಗಳುನವೆಂಬರ್ ಮೂರರಿಂದ ಪತ್ರಕರ್ತರ ಸಂಘದ ಎದುರು ಧರಣಿ ಕುಳಿತು, ಅದೇ ರಸ್ತೆಯಲ್ಲಿ ಹೋಗಿ ಬರುವವರಲ್ಲಿ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಗೆ ಮನವಿ ಪತ್ರಗಳನ್ನು ಹಂಚಿ ಸಾಕ್ಷಿ ಹೇಳುವುದನ್ನು ತಡೆಯುತ್ತಿದ್ದು ಅಲ್ಲದೇ ಆರೋಪಿಗಳು ನಡೆಸುವ ಪತ್ರಿಕೆಗಳಲ್ಲಿ ದೂರುದಾರರ ಹೆಸರುಗಳನ್ನು ಹಾಕಿ ದೂರುದಾರರ ಮೇಲೇ ತೀವ್ರವಾದ ಒತ್ತಡವನ್ನು ಹಾಕುತ್ತಿದ್ದಾರೆ. ಈ ಮೂಲಕ ಸಾಕ್ಷಿದಾರನಾದ ನನ್ನನ್ನು ವಿಚಲಿತಗೊಳಿಸಿ ಕಾನೂನಿನ ಕುಣಿಕೆಯಿಂದ ಪಾರಾಗುವ ಹುನ್ನಾರದಲ್ಲಿ ಇರುತ್ತಾರೆ ಎಂಬುದಾಗಿ ಅರೋಪಿಸಿ ಚಾಣಕ್ಯ ಲಾ ಚೇಂಬರ್ಸನ ನ್ಯಾಯವಾದಿ ಶ್ಯಾಮ್ ಪ್ರಸಾದ್ ಕೈಲಾರ್ ರವರ ಮೂಲಕ ಮಾನ್ಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಭಾರತೀಯ ದ0ಡ ಸ0ಹಿತೆಯ ಕಲ0 195 ಎ ಮತ್ತು 506 ರಡಿಯಲ್ಲಿ ಖಾಸಗಿ ಪಿರ್ಯಾಧಿಯನ್ನು ಪ್ರಸಾದ್ ಬಲ್ನಾಡು ದಾಖಲಿಸಿದ್ದರು.
ಆರೋಪಿಗಳ ಚಿತ್ರ :
ಆರೋಪಿ ನಂ.೧ : ಲೋಕೇಶ್ ಪುತ್ತೂರು
ಆರೋಪಿ ನಂ.೨. : ಶೇಕ್ ಜೈನುದ್ಧೀನ್
ಆರೋಪಿ ನಂ.೩. : ನಾರಾಯಣ ಅಮ್ಮುಂಜೆ