ದುಬೈಯಿಂದ ಮಂಗಳೂರಿಗೆ ಆಗಮಿಸಬೇಕಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್: ಪೈಲಟ್ ಬಾರದೆ ವಿಮಾನ ನಿಲ್ದಾಣದಲ್ಲೇ ಉಳಿದ ಪ್ರಯಾಣಿಕರು – ಕಹಳೆ ನ್ಯೂಸ್
ಮಂಗಳೂರು: ದುಬೈಯಿಂದ ಮಂಗಳೂರಿಗೆ ನಿನ್ನೆ ರಾತ್ರಿ ಆಗಮಿಸಬೇಕಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವೊಂದು ಪೈಲಟ್ ಬಾರದ ಕಾರಣ ರಾತ್ರಿಯಿಡೀ ವಿಮಾನ ನಿಲ್ದಾಣದಲ್ಲೇ ಉಳಿದ ಘಟನೆ ವರದಿಯಾಗಿದೆ.
ವಿಳಂಬವಾದ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ದುಬೈಯಿಂದ ‘ವಾರ್ತಾಭಾರತಿ’ಗೆ ನೀಡಿರುವ ಮಾಹಿತಿಯಂತೆ, ದುಬೈ-ಮಂಗಳೂರು ಏರ್ ಇಂಡಿಯಾ ವಿಮಾನವು ಬುಧವಾರ ರಾತ್ರಿ 11:40ಕ್ಕೆ ದುಬೈಯಿಂದ ಹೊರಡಬೇಕಿತ್ತು. ಅದರಂತೆ ಪ್ರಯಾಣಿಕರೆಲ್ಲರನ್ನು ವಿಮಾನದಲ್ಲಿ ಕುಳ್ಳಿರಿಸಲಾಗಿತ್ತು.
ಆದರೆ ನಿಗದಿತ ಸಮಯಕ್ಕೆ ಪೈಲಟ್ ಆಗಮಿಸಲೇ ಇಲ್ಲ. ಇದೇ ಕಾರಣಕ್ಕೆ ಇಂದು(ಗುರುವಾರ) ಬೆಳಗ್ಗೆವರೆಗೂ ವಿಮಾನವು ನಿಲ್ದಾಣದಲ್ಲೇ ಉಳಿದುಕೊಂಡಿತ್ತು. ಬಳಿಕ ಮುಂಜಾವ 5:30ರ ಸುಮಾರಿಗೆ ಪೈಲಟ್ ಆಗಮಿಸಿದ್ದು, ವಿಮಾನ ಮಂಗಳೂರಿನತ್ತ ಪಯಣ ಆರಂಭಿಸಿದೆ. ಏರ್ ಇಂಡಿಯಾದ ಈ ಅವ್ಯವಸ್ಥೆಯಿಂದ ಪ್ರಯಾಣಿಕರು ರಾತ್ರಿಯಿಡೀ ವಿಮಾನದಲ್ಲೇ ಕಳೆಯಬೇಕಾಯಿತು ಎಂದು ತಿಳಿಸಿದ್ದಾರೆ.
ವಿಮಾನ ಯಾನ ಇಷ್ಟೊಂದು ದೀರ್ಘಾವಧಿಗೆ ವಿಳಂಬವಾಗುತ್ತಿದ್ದರೂ ಏರ್ ಇಂಡಿಯಾ ಅಧಿಕಾರಿಗಳು ಈ ಬಗ್ಗೆ ಪ್ರಯಾಣಿಕರಿಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಹೇಳಲಾಗುತ್ತಿದೆ. ಅಲ್ಲದೆ ಪ್ರಯಾಣಿಕರಿಗೆ ತಂಗಲು ಯಾವುದೇ ಪ್ರತ್ಯೇಕ ವ್ಯವಸ್ಥೆ ಕಲ್ಪಿಸದೆ ವಿಮಾನದಲ್ಲೇ ಉಳಿಸಿಕೊಳ್ಳಲಾಗಿತ್ತು. ಇದರಿಂದ ಮಹಿಳೆಯರು ಮಕ್ಕಳು ಸಂಕಷ್ಟಕ್ಕೊಳಗಾದರು ಎಂದು ಈ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ‘ವಾರ್ತಾಭಾರತಿ’ಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ‘ವಾರ್ತಾಭಾರತಿ’ಗೆ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅಧಿಕಾರಿಗಳು, ದುಬೈ-ಮಂಗಳೂರು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಇಂದು ಮುಂಜಾವ 4:30ರ ಸುಮಾರಿಗೆ ಮಂಗಳೂರು ವಿಮಾನ ನಿಲ್ದಾಣವನ್ನು ತಲುಪಬೇಕಿತ್ತು.
ಆದರೆ ವಿಳಂಬವಾಗಿ ಆಗಮಿಸಿದ್ದು ಬೆಳಗ್ಗೆ 10:30ಕ್ಕೆ ಮಂಗಳೂರು ನಿಲ್ದಾಣ ತಲುಪಲಿದೆ ಎಂದು ತಿಳಿಸಿದ್ದಾರೆ. ಆದರೆ ವಿಮಾನ ಇಷ್ಟೊಂದು ವಿಳಂಬವಾಗಿ ಆಗಮಿಸುತ್ತಿರುವುದಕ್ಕೆ ಕಾರಣ ತಿಳಿದಿಲ್ಲ ಎಂದು ಹೇಳಿದ್ದಾರೆ.