ಮೀರತ್ : ”ಭಾರತದ 130 ಕೋಟಿ ಜನರು ಈಗಿನ ಸರಕಾರವನ್ನೇ ಮತ್ತೆ ಚುನಾಯಿಸಲು ಮಾನಸಿಕವಾಗಿ ಸಿದ್ಧರಾಗಿದ್ದಾರೆ. ಈ ಬಾರಿಯ ಚುನಾವಣೆಯು ಚೌಕೀದಾರ್(ಕಾವಲುಗಾರ)ಹಾಗೂ ದಾಗ್ದಾರ್(ಭ್ರಷ್ಟ)ನಡುವಿನ ಹೋರಾಟವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಉತ್ತರಪ್ರದೇಶದ ಮೀರತ್ನಲ್ಲಿ ಗುರುವಾರ ಬೃಹತ್ ರ್ಯಾಲಿ ನಡೆಸುವ ಮೂಲಕ ಬಿಜೆಪಿಯ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಮೋದಿ ಮಾತನಾಡಿದರು.
ಭಾರತದ ಸ್ವಾತಂತ್ರ ಚಳುವಳಿಯಲ್ಲಿ ಪ್ರಮುಖ ಪಾತ್ರವಹಿಸಿರುವ ದಿಲ್ಲಿಯಿಂದ 70 ಕಿ.ಮೀ. ದೂರದಲ್ಲಿರುವ ಮೀರತ್ನಲ್ಲಿ ಚುನಾವಣಾ ಪ್ರಚಾರ ಆರಂಭಿಸಲಾಗಿದೆ. ನಾನು ದೇಶದ ಹಿತರಕ್ಷಣೆಗಾಗಿ ಕೆಲಸ ಮಾಡುತ್ತಿದ್ದೇನೆ.
ನಿಮ್ಮ ಚೌಕೀದಾರನನ್ನು ಯಾವುದೇ ರಾಜಕೀಯ ಅಥವಾ ಅಂತರ್ರಾಷ್ಟ್ರೀಯ ಒತ್ತಡದಿಂದ ಏನೂ ಮಾಡಲು ಸಾಧ್ಯವಿಲ್ಲ. ನಾನು ನನಗಾಗಿ ಏನೂ ಮಾಡದೇ, ನಿಮಗೆ, ಈ ದೇಶಕ್ಕೆ ಎಲ್ಲವೂ ನೀಡಿದ್ದೇನೆ ಎಂದರು.