ಪುತ್ತೂರು: ಪ್ರಾಮಾಣಿಕತೆಯಿಂದ ಶ್ರೀಮಂತಿಕೆ ಸಿಗದೇ ಇರಬಹುದು ಆದರೆ ನಾವು ಹೃದಯ ಶ್ರೀಮಂತರಾಗುತ್ತೇವೆ. ಮೋಸ ಹಾಗೂ ಸುಳ್ಳು ಹೇಳಿ ಒಮ್ಮೆಗೆ ಪಾರಾಗಬಹುದು. ಆದರೆ ಜೀವನ ಪರ್ಯಂತ ಪಶ್ಚಾತಾಪ ಪಡಬೇಕಾಗುತ್ತದೆ. ನಮ್ಮ ಪ್ರಾಮಾಣಿಕತೆ ಹಾಗೂ ನಿಸ್ವಾರ್ಥ ಪ್ರಯತ್ನ ಸಮಾಜದಲ್ಲಿ ಉತ್ತಮ ಸ್ಥಾನ ಪಡೆಯಲು ಸಹಕಾರಿ ಎಂದು ಸಮಾಜ ಸೇವಕ, ಸಿವಿಲ್ ಇಂಜಿನಿಯರ್ ಪಿ.ಜಿ. ಜಗನ್ನಿವಾಸ ರಾವ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗ ಆಯೋಜಿಸುವ ‘ಜನ-ಮನ’ ಕಾರ್ಯಕ್ರಮದಲ್ಲಿ ಗುರುವಾರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸ್ವಚ್ಛ, ಶುದ್ಧ ಪರಿಸರ ಆಗಬೇಕು ಎಂಬುದು ಪ್ರತಿಯೊಬ್ಬ ನಾಗರಿಕನ ಕನಸು. ಎಲ್ಲದಕ್ಕೂ ಮೊದಲು ಸ್ವಚ್ಛ ಮನಸ್ಸಿನಿಂದ ಸ್ವಚ್ಛ ಮನೆಯಿಂದ ಕೆಲಸ ಆರಂಭಗೊಳ್ಳಬೇಕು. ತಂತ್ರಜ್ಞಾನಗಳನ್ನು ಕಸದಿಂದ ರಸವನ್ನು ಉತ್ಪತ್ತಿ ಮಾಡುವಲ್ಲಿಯೂ ಬಳಸಿಕೊಳ್ಳುವ ಬಗೆಯನ್ನು ಅರಿತುಕೊಳ್ಳಬೇಕು. ನಮ್ಮ ನೆರೆಹೊರೆಯವರಿಗೂ ಆ ಮಾಹಿತಿಗಳನ್ನು ತಲುಪಿಸಬೇಕು. ನಮ್ಮ ಕಸ ನಮ್ಮ ಜವಾಬ್ದಾರಿಯಾಗಬೇಕು ಎಂದು ನುಡಿದರು.
ಶ್ರೀಮಂತಿಕೆಯನ್ನು ತೋರಿಸಿಕೊಳ್ಳಿ ಆದರೆ ವಿದ್ಯೆಯ ಅಹಂ ಸಲ್ಲದು. ವಿನಯವಂತಿಕೆ ಜ್ಞಾನಕ್ಕೆ ಕಲಶವಿದ್ದಂತೆ. ಯೋಗ ಹಾಗೂ ಯೋಗ್ಯತೆಯನ್ನು ಗಳಿಸುವುದು ಹಾಗೂ ಉಳಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ. ಸಾತ್ವಿಕ ಹಠ ಸಾಧನೆಗೆ ಪ್ರೇರಣಾ ಶಕ್ತಿ. ಕಲಿಯುವ ಹುಚ್ಚನ್ನು ಬೆಳೆಸಿಕೊಳ್ಳಿ.
ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಲು ಒಂದು ಹಂತದ ವರೆಗೆ ಎಲ್ಲರೂ ಕಷ್ಟ ಪಡೆಯಲೇ ಬೇಕಾಗುತ್ತದೆ. ಸುಲಭದಲ್ಲಿ ದೊರಕುವ ಸ್ವತ್ತು ಅಲ್ಪಕಾಲಿಕ. ಇಚ್ಛಾ ಶಕ್ತಿ, ಜ್ಞಾನ ಶಕ್ತಿ ಹಾಗೂ ಕ್ರಿಯಾ ಶಕ್ತಿ ಸಾಧನೆಯ ಹಾದಿಯನ್ನು ಸುಗಮ ಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭ ವಿಭಾಗದ ಹಿರಿಯ ಉಪನ್ಯಾಸಕಿ ಭವ್ಯ ಪಿ.ಆರ್. ನಿಡ್ಪಳ್ಳಿ, ರಾಧಿಕಾ ಕಾನತ್ತಡ್ಕ, ಉಪನ್ಯಾಸಕ ಭರತ್ ರಾಜ್, ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಯೋಜಕಿ ಡಾ. ವಿಜಯ ಸರಸ್ವತಿ, ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಅನನ್ಯಾ ಉಪಸ್ಥಿತರಿದ್ದರು.
ಸ್ನಾತಕೋತ್ತರ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಸಂಯೋಜಕ ರಾಕೇಶ್ ಕುಮಾರ್ ಕಮ್ಮಜೆ ಸ್ವಾಗತಿಸಿ ಪ್ರಸ್ತಾವನೆಗೈದರು. ಕಾರ್ಯಕ್ರಮದ ಸಂಯೋಜಕಿ, ಉಪನ್ಯಾಸಕಿ ಪ್ರಜ್ಞಾ ಬಾರ್ಯ ವಂದಿಸಿದರು. ವಿದ್ಯಾರ್ಥಿನಿ ಸ್ವಾತಿ ಉಳಿಪ್ಪು ಕಾರ್ಯಕ್ರಮ ನಿರೂಪಿಸಿದರು.