ಪುತ್ತೂರು: ಜೀವನದಲ್ಲಿ ಮುಂದುವರೆಯಲು ಸ್ಪರ್ಧೆಗಳು ಸಹಕಾರಿ. ವ್ಯಕ್ತಿತ್ವ ವಿಕಸನದಲ್ಲಿ ಈ ಸ್ಪರ್ಧೆಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಜತೆಗೆ ಭಾಗವಹಿಸುವಿಕೆ ಧೈರ್ಯದಿಂದ ಮುನ್ನುಗ್ಗುವ ಗುಣವನ್ನು ಕಲಿಸುತ್ತದೆ. ಹಾಗಾಗಿ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವುದು ಅತೀ ಅಗತ್ಯ ಎಂದು ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿ ಸಂಚಾಲಕ ಎಂ.ಟಿ. ಜಯರಾಮ ಭಟ್ ಹೇಳಿದರು.
ಅವರು ಕಾಲೇಜಿನ ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗ ಆಯೋಜಿಸಿದ ‘ಶೋಧನಾ’ ಅಂತರ್ ಕಾಲೇಜು ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಬುಧವಾರ ಮಾತನಾಡಿದರು.
ಪ್ರತಿಯೊಬ್ಬರಲ್ಲೂ ಒಂದಲ್ಲೊಂದು ಪ್ರತಿಭೆ ಹುದುಗಿದೆ. ಅದನ್ನು ಗುರುತಿಸಿಕೊಳ್ಳಲು ಸ್ಪರ್ಧೆಗಳು ಅವಕಾಶ ಮಾಡಿಕೊಡುತ್ತದೆ. ಸಮಾಜದಲ್ಲಿ ನಮ್ಮನ್ನು ಹೇಗೆ ಗುರುತಿಸಿಕೊಳ್ಳುತ್ತೇವೆ ಎನ್ನುವುದು ಗಣ್ಯವಾಗುತ್ತದೆ. ಉತ್ತಮ ಪ್ರತಿಭೆ ಸಮಾಜವನ್ನು, ಸಂಸ್ಕೃತಿಯನ್ನು ಬೆಳೆಸಬಹುದು ಅಂತೆಯೇ ಸುಂದರ ಸಮಾಜದ ನೆಮ್ಮದಿಯನ್ನು ಕೆಡಿಸ ಬಲ್ಲದು ಹಾಗಾಗಿ ಉತ್ತಮ ಸಂಸ್ಕೃತಿಯತ್ತ ನಮ್ಮ ಚಿತ್ತವನ್ನು ಇಡಬೇಕು ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಜ್ಞಾನ ಎನ್ನುವುದು ತಿಳಿವಳಿಕೆ. ಅದನ್ನು ಗಳಿಸಲು ಯಾವುದೇ ವೇಗದ ಹಾದಿಯಿಲ್ಲ. ಹಂತ ಹಂತವಾಗಿ ಕಲಿಯುತ್ತಾ ಸಾಗಬೇಕು. ವಿದ್ಯೆ ಹಾಗೂ ಜ್ಞಾನಕ್ಕೆ ಮಾನ್ಯತೆ ದೊರೆಯುವುದು ವಿನಯವಂತಿಕೆಯಿಂದ. ಅಹಂಕಾರ ಎನ್ನುವುದು ನಮ್ಮ ಭವಿಷ್ಯವನ್ನು ಕತ್ತಲಿಗೆ ದೂಡುತ್ತದೆ ಎಂದರು.
ಬಹುಮಾನ ವಿತರಣೆ
ನಡೆದ ವಿವಿಧ ಸ್ಪರ್ಧೆಯಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗ ಚಾಂಪಿಯನ್ಸ್ ಟ್ರೋಫಿ ಪಡೆದುಕೊಂಡರೆ, ಉಜಿರೆ ಎಸ್‌ಡಿಎಂ ಕಾಲೇಜಿನ ಸ್ನಾತಕೋತ್ತರ ರಸಾಯನ ಶಾಸ್ತ್ರ ವಿಭಾಗ ರನ್ನರ್ ಅಪ್ ಬಹುಮಾನವನ್ನು ಪಡೆದುಕೊಂಡಿತು.
ಈ ಸಂದರ್ಭ ಐಕ್ಯುಎಸಿ ಸಂಯೋಜಕ ಡಾ. ಶ್ರೀಧರ್ ಹೆಚ್.ಜಿ., ಪದವಿ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಕೃಷ್ಣ ಕಾರಂತ್, ಸ್ನಾತಕೋತ್ತರ ರಸಾಯನ ಶಾಸ್ತ್ರ ವಿಭಾಗದ ಸಂಯೋಜಕ ಡಾ.ವಿಜಯ ಗಣಪತಿ ಕಾರಂತ್, ಶೋಧನಾ ವಿದ್ಯಾರ್ಥಿ ಸಂಯೋಜಕ ಅಭಿಲಾಷ್ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮೋಕ್ಷಿತಾ ಎಂ. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ರಶ್ಮಿ ವಂದಿಸಿದರು.