ಮೈಸೂರು: ಕಾವೇರಿ ಮತ್ತು ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿ ಧಾಮದ ವ್ಯಾಪ್ತಿಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು 200 ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ.
ಕಾವೇರಿ ವನ್ಯಜೀವಿ ಧಾಮದ ಹತ್ತೂರು ಗಸ್ತು ಮತ್ತು ಮಲೆ ಮಹದೇಶ್ವರ ವನ್ಯಜೀವಿಧಾಮದ ಬೋಳಿ ಬೆಟ್ಟ ಅರಣ್ಯ ಪ್ರದೇಶ ಸುಟ್ಟು ಹೋಗಿದೆ. ಜೋರಾಗಿ ಬೀಸುವ ಗಾಳಿ ಮತ್ತು ಬಿಸಿಲಿನ ತಾಪದಿಂದ ಬೆಂಕಿ ಹರಡಿ ದಟ್ಟ ಹೊಗೆ ಆವರಿಸಿದೆ.
ಹತ್ತೂರು ಗಸ್ತಿನಲ್ಲಿ ಒಣಗಿದ ಹುಲ್ಲು ಮತ್ತು ಮರಗಿಡಗಳು ಸುಟ್ಟು ಹೋಗಿದ್ದರೆ, ಹೆಚ್ಚು ಬಿದಿರು ಹೊಂದಿರುವ ಬೋಳಿ ಬೆಟ್ಟ ಪ್ರದೇಶದಲ್ಲಿ ಬಿದಿರು ಸುಟ್ಟು ಹೋಗಿದೆ. ಅರಣ್ಯ ಇಲಾಖೆ, ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಗ್ರಾಮಸ್ಥರು ಸೇರಿ ಒಟ್ಟು 20 ಜನ ಬೆಂಕಿ ನಂದಿಸುವ ಕೆಲಸದಲ್ಲಿ ನಿರತರಾಗಿದ್ದರು.
ಯಾರು ಬೆಂಕಿ ಹಚ್ಚಿದ್ದಾರೆ ಎಂಬುದು ಗೊತ್ತಾಗಿಲ್ಲ. ಗುಪ್ತಾಚಾರ ಇಲಾಖೆಯಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಇನ್ನು 3-4 ದಿನಗಳಲ್ಲಿ ಬೆಂಕಿ ಹಚ್ಚಿದವರನ್ನು ಹುಡುಕಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ವಿಭಾಗೀಯ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ತಿಳಿಸಿದ್ದಾರೆ.