ರಾಹುಲ್‍ಗಾಂಧಿಯು ಇನ್ನೊಬ್ಬರ ವಿರುದ್ಧ ಸುಳ್ಳು, ಆಧಾರರಹಿತ ಆರೋಪ ಮಾಡುವುದೇ ಅಭ್ಯಾಸವಾಗಿದೆ: ಯಡಿಯೂರಪ್ಪ – ಕಹಳೆ ನ್ಯೂಸ್
ಬೆಳಗಾವಿ – ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಹಣ ನೀಡಿರುವುದು ಸಾಬೀತಾದರೆ ತಕ್ಷಣವೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಇಲ್ಲದಿದ್ದರೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ದೇಶದ ಜನತೆಯ ಮುಂದೆ ಬಹಿರಂಗ ಕ್ಷಮೆ ಕೇಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸವಾಲು ಹಾಕಿದ್ದಾರೆ.
ಡೈರಿ ಬಗ್ಗೆ ಈಗಾಗಲೇ ಐಟಿ ಅಧಿಕಾರಿಗಳೇ ನಕಲಿ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ರಾಹುಲ್‍ಗಾಂಧಿ ಪ್ರಚಾರಕ್ಕಾಗಿ ನನ್ನ ವಿರುದ್ದ ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಒಂದು ವೇಳೆ ನಾನು ಹಣ ನೀಡಿದ್ದೇನೆ ಎಂದು ರುಜುವಾತಾದರೆ ಇಂದೇ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಪಡೆಯುತ್ತೇನೆ. ನನ್ನ ಸವಾಲನ್ನು ಸ್ವೀಕರಿಸಲು ಅವರು ಸಿದ್ದರಿದ್ದಾರೆಯೇ ಎಂದು ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್‍ಗಾಂಧಿ ಒಬ್ಬ ಬಚ್ಚಾ ಎಂಬುದು ಪದೇ ಪದೇ ಸಾಬೀತಾಗುತ್ತಲೇ ಇದೆ. ಅವರ ಮಾತನ್ನು ಅವರ ಪಕ್ಷದಲ್ಲೇ ಯಾರೊಬ್ಬರೂ ನಂಬುವುದಿಲ್ಲ. ಕೇವಲ ಇನ್ನೊಬ್ಬರ ವಿರುದ್ಧ ಸುಳ್ಳು ಹಾಗೂ ಆಧಾರರಹಿತ ಆರೋಪ ಮಾಡುವುದೇ ಅವರಿಗೆ ಅಭ್ಯಾಸವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ತಿರಸ್ಕ್ರತವಾಗಲಿದ್ದು, ಚುನಾವಣಾಧಿಕಾರಿ ಇನ್ನು 24 ಗಂಟೆಯೊಳಗೆ ಜಿಲ್ಲೆಯನ್ನು ಖಾಲಿ ಮಾಡಬೇಕು ಎಂದು ತಾಕೀತು ಮಾಡಿದರು.
ನಿಖಿಲ್‍ಕುಮಾರಸ್ವಾಮಿ ನಾಮಪತ್ರ ಈಗ ತಾತ್ಕಾಲಿಕವಾಗಿ ಸಿಂಧುವಾಗಿರಬಹುದು. ಆದರೆ ನ್ಯಾಯಾಲಯದಲ್ಲಿ ಮುಂದೆ ತಿರಸ್ಕ್ರತವಾಗುವುದು ಬಹುತೇಕ ನೂರಕ್ಕೆ ನೂರರಷ್ಟು ಖಚಿತ. ಇದರ ಸುಳಿವು ಅರಿತಿರುವ ಕುಮಾರಸ್ವಾಮಿ ಹತಾಶರಾಗಿ ಬೇರೊಬ್ಬರ ಮೇಲೆ ಮನಬಂದಂತೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಾಮಪತ್ರವನ್ನು ತಿದ್ದುಪಡಿ ಮಾಡಿರುವುದು ರುಜುವಾತಾಗಿದೆ. ಮಂಡ್ಯ ಜಿಲ್ಲಾಧಿಕಾರಿ ಸರ್ಕಾರದ ಕೈಗೊಂಬೆಯಂತೆ ವರ್ತಿಸಿದ್ದಾರೆ. ತಕ್ಷಣವೇ ಚುನಾವಣಾ ಆಯೋಗ ಮಧ್ಯಪ್ರವೇಶಿಸಿ ಅವರನ್ನು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು.
ಮಂಡ್ಯದಲ್ಲಿ ಸ್ವಾಭಿಮಾನಿ ಮತದಾರರು ಸುಮಲತಾರನ್ನು ಗೆಲ್ಲಿಸಲು ತೀರ್ಮಾನಿಸಿದ್ದಾರೆ. ನಿಖಿಲ್‍ಕುಮಾರಸ್ವಾಮಿ ಸೋಲುವುದು ನೂರಕ್ಕೆ ನೂರರಷ್ಟು ಖಚಿತ.
ಸುಮಲತಾ ಪರ ಎದ್ದಿರುವ ಅಲೆಯನ್ನು ಸಹಿಸಲು ಸಾಧ್ಯವಾಗದೆ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ನಾಯಕರು ಮನಬಂದಂತೆ ಮಾತನಾಡುತ್ತಿದ್ದಾರೆ. ಜಿಲ್ಲೆಯ ಜನತೆ ಎಲ್ಲವನ್ನು ಗಮನಿಸುತ್ತಿದ್ದು, ಸೂಕ್ತ ಕಾಲದಲ್ಲಿ ಸರಿಯಾದ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂದು ಹೇಳಿದರು.
ಯಾರು ಏನೇ ಹೇಳಿದರೂ ಈ ಬಾರಿ ಕೇಂದ್ರದಲ್ಲಿ ಮತ್ತೆ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಅಧಿಕಾರಕ್ಕೆ ಬರುವುದನ್ನು ಯಾರೊಬ್ಬರು ತಡೆಯಲು ಸಾಧ್ಯವಿಲ್ಲ. ಬಿಜೆಪಿ ನೇತೃತ್ವದ ಎನ್‍ಡಿಎ ಕೂಟ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಒಂದಾಗಿದ್ದರೂ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದೇವೆ ಎಂದು ತಿಳಿಸಿದರು.
ರಮೇಶ್ ಕತ್ತಿಗೆ ಟಿಕೆಟ್ ಸಿಗದೆ ಇರುವುದಕ್ಕೆ ಉಮೇಶ್ ಕತ್ತಿ ತುಸು ಅಸಮಾಧಾನವಾಗಿದ್ದಾರೆ. ಆದರೆ ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕೆಂಬ ಕಾರಣಕ್ಕಾಗಿ ಎಲ್ಲರೂ ತಮ್ಮ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಗ್ಗಟ್ಟಿನಿಂದ ಪಕ್ಷದ ಗೆಲುವಿಗೆ ಶ್ರಮಿಸಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.