ವಾಧ್ರಾ – ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್‍ಸಿಪಿ) ಸಂಸ್ಥಾಪಕ ಶರದ್ ಪವಾರ್ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಒಬ್ಬ ದುರ್ಬಲ ನಾಯಕರಾಗಿದ್ದು ಪಕ್ಷದ ಹಿಡಿತ ಅವರ ಕೈ ತಪ್ಪುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
ಮಹಾರಾಷ್ಟ್ರದಲ್ಲಿ ವಾಧ್ರಾದಲ್ಲಿಂದು ಬಿಜೆಪಿ-ಶಿವಸೇನೆ ಮೈತ್ರಿ ಪಕ್ಷದ ಚುನಾವಣಾ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಿ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಶರದ್ ಪವಾರ್ ಮಹಾರಾಷ್ಟ್ರದ ಜನಪ್ರಿಯ ನಾಯಕರೇ ಆಗಿದ್ದರೇ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬಹುದಿತ್ತು. ಆದರೆ ಪರಿಸ್ಥಿತಿ ತಮಗೆ ಅನುಕೂಲಕರವಾಗಿಲ್ಲ. ಮತ್ತು ಸೋಲಿನ ಭೀತಿಯಿಂದ ಅವರು ಸ್ಪರ್ಧಾ ಕಣದಿಂದ ದೂರ ಉಳಿದಿದ್ದಾರೆ ಎಂದು ಟೀಕಿಸಿದರು.
ಎಂದಿನಂತೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರೆಸಿದ ಪ್ರಧಾನಿ ಮೋದಿ ಈ ಪಕ್ಷದ ಮುಖಂಡರು ಶಾಂತಿಪ್ರಿಯ ಹಿಂದೂಗಳನ್ನು ಭಯೋತ್ಪಾದಕರು ಎಂದು ಆರೋಪಿಸಿ ಹಿಂದೂಗಳ ವಿರೋಧ ಎದುರಿಸಿದ್ದಾರೆ ಎಂದು ಮೋದಿ ಹೇಳಿದರು.
ಕಾಂಗ್ರೆಸ್ ಸೇರಿದಂತೆ ಅದರೊಂದಿಗೆ ಒಡನಾಟ ಹೊಂದಿರುವ ಮಿತ್ರಪಕ್ಷಗಳಲ್ಲೂ ಸೋಲಿನ ಭೀತಿ ಕಾಡುತ್ತಿದ್ದೆ. ಇದೇ ಕಾರಣಕ್ಕಾಗಿ ಪ್ರಬಲ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಲು ಮೀನಾಮೇಷ ಎಣಿಸುತ್ತಿದ್ದೆ ಎಂದು ಮೋದಿ ಲೇವಡಿ ಮಾಡಿದರು.