ನೆಕ್ಕಿಲಾಡಿ : ಜೇಸಿಐ ನೆಕ್ಕಿಲಾಡಿ ಘಟಕದ ವತಿಯಿಂದ ಶ್ರೀರಾಮ ಶಾಲೆ ನಟ್ಟಿಬೈಲು ಇಲ್ಲಿನ ವಿದ್ಯಾರ್ಥಿಗಳಿಗೆ “ಆರೋಗ್ಯ ಮತ್ತು ಶುಚಿತ್ವ” ಎಂಬ ವಿಷಯದ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಶಾಲೆಯ ಸಂಚಾಲಕರಾದ ಶ್ರೀ ಯ.ಜಿ ರಾಧಾ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿ, ನೆಕ್ಕಿಲಾಡಿ ಘಟಕವು ಉತ್ತಮವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು ಇಂತಹ ಕಾರ್ಯಕ್ರಮಗಳಿಗೆ ನಮ್ಮ ಶಾಲೆಯ ಬಾಗಿಲು ಎಂದು ಅವರಿಗೆ ತೆರೆದಿದೆ, ಸಮಾಜದ ಸ್ವಾಸ್ಥ್ಯ ಹಾಗೂ ವೈಯುಕ್ತಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವಲ್ಲಿ ಜಿಸಿಐ ನೆಕ್ಕಿಲಾಡಿ ಘಟಕ ಯಶಸ್ವಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ವಿನೀತ್ ಶಗ್ರಿತ್ತಾಯ ಮಾತನಾಡಿ ಇನ್ನು ಮಕ್ಕಳಿಗೆ ಬೇಸಿಗೆ ರಜೆಯೂ ಶುರುವಾಗಲಿರುವ ಕಾರಣ ಬೇಸಿಗೆಯ ಉರಿ ಬಿಸಿಲಲ್ಲಿ ಮಕ್ಕಳು ಆರೋಗ್ಯದ ಕಡೆ ಹೇಗೆ ಗಮನ ಕೊಡಬೇಕು ಸ್ವಚ್ಛತೆಯನ್ನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಮಕ್ಕಳಿಗೆ ಪ್ರಯೋಜನವಾಗಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ತರಬೇತುದಾರರಾದ ಡಾಕ್ಟರ್ ಗೋವಿಂದ ಪ್ರಸಾದ್ ಕಜೆಯವರು ಮಕ್ಕಳಿಗೆ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು, ಆರೋಗ್ಯ ಕಾಪಾಡಿಕೊಳ್ಳಲು ಸ್ವಚ್ಛತೆ ಹೇಗೆ ಮುಖ್ಯ ಎಂಬುದನ್ನು ಸಂಕ್ಷಿಪ್ತವಾಗಿ ತರಬೇತಿಯ ಮೂಲಕ ವಿವರಿಸಿದರು .ಈ ಕಾರ್ಯಕ್ರಮದಲ್ಲಿ ಶಾಲೆಯ ಎಂಟನೇ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆದಂತಹ ಅಕ್ಷಯ ಶಂಕರಿ ಹಾಗೂ ದ್ವಿತೀಯ ಸ್ಥಾನ ಪಡೆದಂತಹ ಸಿಂಚನ್.ಎ ಇವರನ್ನು ಸನ್ಮಾನಿಸಲಾಯಿತು.
ಶಾಲೆಯ ಮುಖ್ಯೋಪಾಧ್ಯಾಯಿನಿ ಕುಮಾರಿ ವಿಮಲಾ ಎಲ್ಲರನ್ನು ವೇದಿಕೆಗೆ ಆಹ್ವಾನಿಸಿದರು ಹಾಗೂ ಜೆಸಿಐ ನೆಕ್ಕಿಲಾಡಿ ಘಟಕದ ಕಾರ್ಯದರ್ಶಿಯಾದ ರಮೇಶ್ ಸುಭಾಷ್ ನಗರ ಇವರು ಎಲ್ಲರಿಗೂ ವಂದಿಸಿದರು ಶಾಲೆಯ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು.