ಕಡಬ : ಹಠಾತ್ ಸುರಿದ ಸಿಡಿಲು ಮಿಶ್ರಿತ ಭಾರೀ ಗಾಳಿ ಮಳೆಗೆ ಹಲವು ಮರಗಳು ರಸ್ತೆಗುರುಳಿದ್ದು, ಅಪಾರ ಕೃಷಿ ಹಾನಿಯಾಗಿ ಲಕ್ಷಾಂತರ ರೂ. ನಷ್ಟ ಉಂಟಾದ ಘಟನೆ ಮಂಗಳವಾರ ಸಂಜೆ ಕಡಬದಲ್ಲಿ ನಡೆದಿದೆ.
ಮಂಗಳವಾರ ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣ ಇತ್ತಾದರೂ ಸಂಜೆ ವೇಳೆಗೆ ಗುಡುಗು ಮಿಂಚಿನ ಆರ್ಭಟದೊಂದಿಗೆ ಭಾರೀ ಗಾಳಿ ಮಳೆ ಸುರಿದಿದೆ. ಪರಿಣಾಮ ಕಟ್ಟಡಗಳ ಮೇಲ್ಛಾವಣಿಯ ಸಿಮೆಂಟ್ ಶೀಟುಗಳು, ಅಂಗಡಿಯ ನಾಮಫಲಕಗಳು ಸೇರಿದಂತೆ ಹಲವು ಸೊತ್ತುಗಳು ನಾಶವಾಗಿವೆ.
ಮರ್ಧಾಳದ ಚಾಕೋಟೆಕೆರೆ, ಅಳೇರಿ ಹಾಗೂ ಕೋಡಂದೂರು ಎಂಬಲ್ಲಿ ಬೃಹತ್ ಗಾತ್ರದ ಮೂರು ಮರಗಳು ರಸ್ತೆಗುರುಳಿ ಬಿದ್ದುದ್ದರಿಂದಾಗಿ ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ಸಂಚಾರದಲ್ಲಿ ಕೆಲಕಾಲ ತಡೆಯುಂಟಾಯಿತು. ಇದರಿಂದಾಗಿ ಹಲವು ಯಾತ್ರಿಕರು ಪರದಾಡಿದರು. ಸ್ಥಳೀಯರು ರಸ್ತೆಗೆ ಬಿದ್ದಿದ್ದ ಮರಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಘಟನೆಯಲ್ಲಿ ಹಲವು ವಿದ್ಯುತ್ ಕಂಬಗಳು ಮುರಿದು ಧರೆಗುರುಳಿದ್ದು, ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕಾಗಮಿಸಿ ರಸ್ತೆಯಲ್ಲಿ ಬಿದ್ದಿದ್ದ ವಿದ್ಯುತ್ ತಂತಿಗಳನ್ನು ತೆರವುಗೊಳಿಸಿದರು. ಹಲವು ಮನೆಗಳ ಮೇಲ್ಛಾವಣಿಯ ಹಂಚು, ಶೀಟುಗಳು ಗಾಳಿಗೆ ಹಾರಿ ಹೋಗಿವೆ. ಸಾವಿರಾರು ಅಡಿಕೆ ಮರಗಳು, ತೆಂಗು, ರಬ್ಬರ್ ಸೇರಿದಂತೆ ಹಲವು ಕೃಷಿಗಳು ನಾಶವಾಗಿವೆ.