ಸುಳ್ಯ: ಇತಿಹಾಸ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿಯ ಸಂಭ್ರಮ ಜೋರಾಗಿದೆ. ಪಂಚಮಿಯ ಹಿನ್ನಲೆಯಲ್ಲಿ ಮಧ್ಯಾಹ್ನ ಕ್ಷೇತ್ರದಲ್ಲಿ ಎಡೆ ಮಡಸ್ನಾನ ನಡೆಯಲಿದೆ. ಮಧ್ಯಾಹ್ನ ವೇಳೆಗೆ ಸುಬ್ರಹ್ಮಣ್ಯನಿಗೆ ವಿಶೇಷ ಪೂಜೆ ಬಳಿಕ ಎಡೆ ಮಡಸ್ನಾನ ನಡೆಯಿತು. ಇನ್ನೂರಕ್ಕಿಂತ ಹೆಚ್ಚು ಭಕ್ತರು ಎಡೆ ಮಡಸ್ನಾನ ಸೇವೆಯಲ್ಲಿ ಪಾಲ್ಗೊಂಡರು.
ದೇವರ ನೈವೇದ್ಯದಲ್ಲಿ ಭಕ್ತರು ಉರುಳು ಸೇವೆ ನಡೆಸಿದ್ದು, ಯಾವುದೇ ಗೊಂದಲವಾಗದಂತೆ ಕ್ಷೇತ್ರದ ಆಡಳಿತ ಮಂಡಳಿ ಕ್ರಮ ಕೈಗೊಂಡಿತ್ತು. ಚಂಪಾಷಷ್ಠಿಯ ಹಿನ್ನಲೆಯಲ್ಲಿ ಕುಮಾರಾಧಾರ ನದಿ ದಡದಿಂದ ಕ್ಷೇತ್ರದವರೆಗೆ ಬೀದಿ ಮಡಸ್ನಾನ ಕೂಡಾ ನಡೆಯುತ್ತಿದ್ದು ಕಠಿಣ ಆಚರಣೆಯಲ್ಲಿ ಭಕ್ತರು ಪಾಲ್ಗೊಂಡರು. ಇನ್ನು ಪಂಚಮಿಯ ಹಿನ್ನಲೆಯಲ್ಲಿ ರಾತ್ರಿ ಕ್ಷೇತ್ರದಲ್ಲಿ ಪಂಚಮಿ ರಥೋತ್ಸವ ನಡೆಯಲಿದೆ. ನಾಳೆ ಮುಂಜಾನೆ ಚಂಪಾ ಷಷ್ಠಿಯ ಮಹಾ ರಥೋತ್ಸವ ನಡೆಯಲಿದ್ದು ಲಕ್ಷಾಂತರ ಜನ ಈ ಪುಣ್ಯ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.