ಯುಗಾದಿ ಹಬ್ಬದ ಆರ್ಥಿಕ ಶುಭಾಶಯಗಳು. ಹೊಸತನವನ್ನ ಹೊತ್ತು ತರೋ ಯುಗಾದಿ ಬಂದೇ ಬಿಟ್ಟಿದೆ. ಪಕ್ಷಿಗಳಲ್ಲಿ ನವಿಲು, ಪ್ರಾಣಿಗಳಲ್ಲಿ ಮಾನವ, ಋತುಗಳಲ್ಲಿ ವಸಂತ ಋತು ಶ್ರೇಷ್ಠ ಅನ್ನೊವಂತೆ, ಎಲ್ಲ ಹಬ್ಬಗಳಲ್ಲಿ ಯುಗಾದಿ ಶ್ರೇಷ್ಠ. ಈ ಹಬ್ಬವನ್ನ ಸಾಮಾನ್ಯವಾಗಿ ಎಲ್ಲರೂ ಆಚರಿಸುವರು. ಹಬ್ಬಗಳಲ್ಲಿ ಶ್ರೇಷ್ಠವಾದ ಪ್ರಸಿದ್ಧವಾದ ಯುಗಾದಿ ಹಬ್ಬ ಚ್ಯೆತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಂದು ಬರುತ್ತದೆ. ಯುಗಾದಿ ಹಬ್ಬವು ಹಿಂದುಗಳ ದೃಷ್ಟಿಯಲ್ಲಿ ವರ್ಷಾರಂಭದ ಪವಿತ್ರ ದಿನ.
ಯುಗಾದಿ ಬಂದಿತೆಂದರೆ ಎಲ್ಲಡೆಯಲ್ಲಿ ಸಂತೋಷ, ಸಂಭ್ರಮ ತುಂಬಿ ತುಳುಕುತ್ತಿರುತ್ತದೆ. ಚೈತ್ರಮಾಸದಿಂದ ವಸಂತ ಋತು ಶುರುವಾಗುತ್ತದೆ. ವನಗಳೆಲ್ಲ್ಲ ಚಿಗುರಿ ಹೂ ಬಿಟ್ಟು ಯುಗಾದಿಯ ಹರ್ಷವನ್ನು ಬೀರುವವು. ಎಲ್ಲಿ ನೋಡಿದರೂ ಮರಗಿಡಬಳ್ಳಿಗಳು ಹಸಿರಾಗಿ ನಳನಳಿಸುತ್ತಿರುವುದು. ಯುಗಾದಿಯ ದಿನ ಮುಂಜಾನೆ ಬೇವು ಮಿಶ್ರಿತ ನೀರಿನಿಂದ ಸ್ನಾನ ಮಾಡಿ, ಹೊಸಬಟ್ಟೆ ಧರಿಸಿ ತಂತಮ್ಮ ದೇವರನ್ನು ಪೂಜಿಸಿ, ಬೇವು ಬೆಲ್ಲವನ್ನು ಸೇವನೆ ಮಾಡುತ್ತಾರೆ. ಬೇವು-ಬೆಲ್ಲವು ಸುಖ-ದುಃಖ, ರಾತ್ರಿ-ಹಗಲು ಇವುಗಳ ಸಂಕೇತಗಳಾಗಿವೆ.
ಹೊಸ ವರ್ಷದ ಪ್ರಾರಂಭದ ಸಂಕೇತವಾದ ಯುಗಾದಿಯನ್ನು ಬಡವ-ಬಲ್ಲಿದರೆಂಬ ತಾರತಮ್ಯವಿಲ್ಲದೇ ಎಲ್ಲಾ ಹಿಂದೂಗಳೂ ಆಚರಿಸುತ್ತಾರೆ. ರೈತರು ಎತ್ತುಗಳನ್ನು ಶೃಂಗರಿಸಿ ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ. ವ್ಯಾಪಾರಿಗಳು ಹಾಗೂ ಇನ್ನಿತರರು ಕೂಡ ಅಂದಿನ ದಿನವೇ ಶುಭ ಕಾರ್ಯವನ್ನು ಮಾಡುತ್ತಾರೆ.
ಯುಗಾದಿಯ ಅರ್ಥ ‘ಯುಗದ ಆದಿ’. ‘ಯುಗಾದಿ’ ಎಂಬ ಶಬ್ದ ಸಂಸ್ಕೃತದ ‘ಯುಗ’ ಮತ್ತು ‘ಆದಿ’ ಎಂಬ ಎರಡು ಶಬ್ದಗಳಿಂದ ಕೂಡಿದೆ. ಯುಗವೆಂದರೆ ಸೃಷ್ಟಿಯ ಕಾಲಮಾನ. ಅರ್ಥಾತ್ ಹೊಸ ವರ್ಷ; ಆದಿ ಎಂದರೆ ಆರಂಭ. ಯುಗಾದಿ ತತ್ಸಮ ಪದವಾದರೆ ಉಗಾದಿ ತದ್ಭವ, ಯುಗಾದಿ ಹಬ್ಬವು ಪೌರಾಣಿಕ ಹಾಗೂ ಐತಿಹಾಸಿಕ ವಿಶೇಷತೆಗಳ ದಿನವಾಗಿದೆ. ಇದು ಬ್ರಹ್ಮದೇವನ ಸೃಷ್ಟಿಯ ದಿನ.
ಪಂಚಾಂಗಗಳೂ ಇದನ್ನೇ ಹೇಳುತ್ತವೆ. ವೇದಗಳ ಕಾಲದಿಂದಲೂ ಯುಗಾದಿಯ ಮಹಿಮೆ ಇವೆ. ಎಲ್ಲ ಶಾಸ್ತ್ರ, ಗ್ರಂಥಗಳಲ್ಲಿ ಯುಗಾದಿಯನ್ನು ಕುರಿತು ಹೇಳಲಾಗಿದೆ. ಶ್ರೀರಾಮನು ರಾವಣನನ್ನು ಸಂಹರಿಸಿ ಬಂದಾಗ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪಟ್ಟಾಭಿಷೇಕವಾದ ದಿನ. ಅಲ್ಲದೆ ಮಹಾಭಾರತದಲ್ಲಿ ಬರುವ ಚೀದಿರಾಜ್ಯದ ಅರಸು ವಸುವಿನ ಉಗ್ರ ತಪಸ್ಸಿಗೆ ಮೆಚ್ಚಿದ ಇಂದ್ರನು ವೈಜಯಂತಿ ಮಾಲೆಯನ್ನು ಅವನಿಗೆ ಕೊಟ್ಟು, ಚಿನ್ನದ ಕಲಶವುಳ್ಳ ಚಕ್ರಾಧಿಪತ್ಯದ ಧ್ವಜವನ್ನು ರಾಜನ ತಲೆಯ ಮೇಲೆ ಇಟ್ಟಿರುವ ದಿನ.
ಮಾನವರ ಬದುಕಿನಲ್ಲಿ ಸುಖ-ದುಃಖಗಳು ಅವಿಭಾಜ್ಯ ಅಂಶಗಳು. ಇವೆಲ್ಲವುಗಳೊಂದಿಗೆ ಸಮತೋಲನ ಕಾಯ್ದುಕೊಂಡೇ ಮನುಷ್ಯ ಬದುಕಬೇಕು. ಜೀವನ ಕಷ್ಟ-ಸುಖ. ನೋವು ನಲಿವುಗಳ ಸಮ್ಮಿಶ್ರಣವಾಗಿದೆ. ಇವೆರಡೂ ಒಟ್ಟಿಗೆ ಇರುವವು. ಎರಡನ್ನೂ ಸಮದೃಷ್ಟಿಯಿಂದ ಸವಿಯುವುದನ್ನು ಕಲಿಯಲೆಂದೇ ಯುಗಾದಿಯಂದು ಬೇವು-ಬೆಲ್ಲವನ್ನು ತಿನ್ನಿಸುವರು.
ನೋವು ನಲಿವು ಎರಡಕ್ಕೂ ನಾವು ಸ್ವಾಗತ ನೀಡಬೇಕು. ನಾವು ಬೇವಿನ ಸಮಾನವಾದ ದು:ಖ, ಅಶಾಂತಿಯ, ಪ್ರಪಂಚದಲ್ಲಿದ್ದರೂ ಬೆಲ್ಲದ ಸಮಾನವಾದ ಶಾಂತಿ, ಅತೀಂದ್ರಿಯ ಸುಖ, ಆತ್ಮೀಯತೆ, ಸ್ನೇಹ, ಮಧುರತೆಯ ಅನುಭವ ಮಾಡುವುದು ಎಂಬ ನಿಜ ಅರ್ಥವಾಗಿದೆ.
ಬೇವಿನ ಎಲೆಯೂ ಮಾನವನ ಆರೋಗ್ಯಕ್ಕೆ ಸಹಕಾರಿಯಾಗುವುದು. ‘ಶತಾಯುರ್ವಜ್ರ ದೇಹಾಯ ಸರ್ವಸಂಪತ್ಕರಾಯಚ// ಸರ್ವಾರಿಷ್ಟವಿನಾಶಾಯ ನಿಂಬಕಂ ದಳ ಭಕ್ಷಣಂ//’ ಎಂದು ಆಯುರ್ವೇದವು ಬೇವಿನ ಮಹಿಮೆಯನ್ನು ಸಾರಿದೆ. ಯುಗಾದಿಯಂದು ಇಷ್ಟದೇವತೆಯ ಪೂಜೆ ಮಾಡುವರು. ಆ ದಿನ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಕೆಲವು ಊರುಗಳಲ್ಲಿ ಪಂಚಾಂಗ ಶ್ರವಣವನ್ನು ಏರ್ಪಡಿಸುವರು.
ಎಲ್ಲಾ ರಾಶಿಗಳ ಫಲಾಫಲಗಳನ್ನು ವಿವರಿಸುವರು. ಪ್ರತಿವರ್ಷದಲ್ಲೂ ಬರುವ ಕಷ್ಟ-ನಷ್ಟ, ಮಳೆ-ಬೆಳೆ ವಿಚಾರವನ್ನು ಜನರು ವರ್ಷದ ಪ್ರಾರಂಭದಲ್ಲೇ ತಿಳಿದುಕೊಳ್ಳಬಹುದು. ಪಂಚಾಂಗ ಕೇಳುವುದರಿಂದ ಮಾನವನ ಆಯುಷ್ಯ ಹೆಚ್ಚಾಗುತ್ತದೆ. ರೋಗ-ಪಾಪಗಳು ನಾಶವಾಗಿ ಗಂಗಾ ಸ್ನಾನ ಮಾಡಿದಷ್ಟು ಫಲ ಸಿಗುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೇ ನವಗ್ರಹ ಪೂಜೆಗಳನ್ನು ಮಾಡುವರು ಹಾಗೂ ದಾನ ಮಾಡುವ ಸಂಪ್ರದಾಯಗಳೂ ಇರುವವು.
ಒಟ್ಟಿನಲ್ಲಿ ಈ ಯುಗಾದಿ ಎಲ್ಲರ ಜೀವನದಲ್ಲೂ ಒಲಿತನ್ನ ಮಾಡಿ ಇಷ್ಟಾರ್ಥ ಈಡೇರುವಂತಾಗಲಿ.