ನವದೆಹಲಿ : ಹೈವೋಲ್ಟೇಜ್ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ (ಸೋಮವಾರ) ಇಂದು ಅಬ್ ಹೋಗಾ ನ್ಯಾಯ್ ಎಂಬ ಚುನಾವಣಾ ಪ್ರಚಾರದ ಘೋಷವಾಕ್ಯವನ್ನು ಬಿಡುಗಡೆ ಮಾಡಿದೆ. ಅಬ್ ಹೋಗಾ ನ್ಯಾಯ್ (ಇನ್ನು ನ್ಯಾಯ ಸಿಗುತ್ತೆ) ಎಂಬ ಹೊಸ ಘೋಷವಾಕ್ಯವನ್ನು ಕಾಂಗ್ರೆಸ್ ತನ್ನ ಟ್ವಿಟ್ಟರ್‍ನಲ್ಲಿ ಪರಿಚಯಿಸಿದೆ.
ದೆಹಲಿಯಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯ ಮುಖಂಡ ಆನಂದ್ ಶರ್ಮ ಕಾಂಗ್ರೇಸ್ ಚುನಾವಣಾ ಪ್ರಚಾರದ ಸ್ಲೋಗನ್ ಮತ್ತು ಥೀಮ್ ಸಾಂಗ್(ಧ್ಯೇಯ ಗೀತೆ)ನ್ನು ಬಿಡುಗಡೆಗೊಳಿಸಿದರು. ದೇಶದ ಎಲ್ಲ ವರ್ಗಗಳಿಗೆ ನ್ಯಾಯ ಒದಗಿಸುವುದು ಕಾಂಗ್ರೆಸ್ ಪಕ್ಷದ ಹೆಗ್ಗುರಿಯಾಗಿದೆ.
ಕಡುಬಡವರಿಗೆ ಕನಿಷ್ಠ ಆದಾಯ ಭದ್ರತೆ ನೀಡುವ ಪರಿಕಲ್ಪನೆಯನ್ನು ಘೋಷಣೆ ಮಾಡಿರುವ ರಾಹುಲ್, ಅದನ್ನೇ ಕೇಂದ್ರೀಕರಿಸಿ ಈ ಟ್ಯಾಗ್‍ಲೈನ್ ಪ್ರಚಾರ ಮಾಡುತ್ತಿದ್ದಾರೆ.
ವಯಸ್ಕರರು, ಯುವಕರು, ವಿದ್ಯಾರ್ಥಿಗಳು, ರೈತರು, ವಿಕಲ ಚೇತನರು, ಮಹಿಳೆಯರ ಜೊತೆ ತಾನಿರುವೆ ಎಂಬ ಫೋಟೋಗಳು ಹಾಗೂ ಹಲವು ಘೋಷಣೆಗಳನ್ನೂ ಕಾಂಗ್ರೆಸ್‍ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಶತಾಯಗತಾಯ ಬಿಜೆಪಿಯನ್ನು ಮಣಿಸಿ, ಅಧಿಕಾರ ಗಿಟ್ಟಿಸಿಕೊಳ್ಳಬೇಕೆಂದು ಎಲ್ಲಿಲ್ಲದ ಪ್ರಯತ್ನ ನಡೆಸುತ್ತಿದೆ. ಬಿಜೆಪಿ ಚೌಕೀದಾರ್ ಘೋಷಣೆಗೆ ಟ್ಯಾಗ್ ನೀಡಲು ಅಬ್ ಹೋಗಾ ನ್ಯಾಯ್ ಘೋಷಣೆ ನೀಡಲಾಗಿದೆ. ಈ ಅಸ್ತ್ರದ ಮೂಲಕ ಲೋಕಸಮರದಲ್ಲಿ ಸೆಣೆಸಾಡಲು ಸಿದ್ಧಗೊಳ್ಳುತ್ತಿದೆ.