ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಶ್ರೀ ರಾಮಚಂದ್ರನನ್ನು ಬಳಸಿಕೊಂಡ ಬಿಜೆಪಿ, ಈ ಬಾರಿ ಸಂಪೂರ್ಣ ಕೈಬಿಟ್ಟಿದೆ. ಹಿಂದೂ ಎಂದು ಹೇಳಿಕೊಂಡು ಹಿಂದೂಗಳಲ್ಲೇ ಭೇದಭಾವ ತರಲು ಹೊರಟಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಹೇಳಿದರು.
ಮಂಗಳೂರಿನ ಕಾಂಗ್ರೆಸ್-ಜೆಡಿಎಸ್ ಚುನಾವಣಾ ಪ್ರಚಾರ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಬಿಲ್ಲವರ ಯುವಕರನ್ನು ಕೋಮು ಗಲಭೆಗಳಿಗೆ ಬಳಕೆ ಮಾಡಿ ಅಪರಾಧಿಗಳನ್ನಾಗಿ ಮಾಡಿದ್ದೇ ಬಿಜೆಪಿ ಸಾಧನೆ. ಬಿಜೆಪಿ ಆಣತಿಯಂತೆ ಕೆಲಸ ಮಾಡಿ ಬಿಲ್ಲವ ಯುವಕರು ಜೈಲು ಸೇರಿದ್ದಾರೆ. ಅವರನ್ನು ಜೈಲಿನಿಂದ ಬಿಡಿಸುವ ಮತ್ತು ಅವರ ಪರವಾಗಿ ವಕಾಲತ್ತು ವಹಿಸುವ ಕೆಲಸವನ್ನೂ ಬಿಜೆಪಿ ಮಾಡುತ್ತಿಲ್ಲ. ಅಮಾಯಕರನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ದ.ಕ.ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಿಥುನ್ ರೈ ಅವರನ್ನು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಗೂಂಡಾ ಎಂದು ಲೇವಡಿ ಮಾಡಿದ್ದಾರೆ. ಆದರೆ, ಈ ಮೊದಲು ಅಧಿಕಾರದಲ್ಲಿದ್ದಾಗ ಇದೇ ಅಶೋಕ್ ಅವರು ಆರೆಸ್ಸೆಸ್, ಬಜರಂಗ ದಳ ಕಾರ್ಯಕರ್ತರಿಗೆ ಗೂಂಡಾಗಳೆಂಬ ಪಟ್ಟ ಕಟ್ಟಿದ್ದರು. ಇಲ್ಲಿಯವರೆಗೆ ಆರೆಸ್ಸೆಸ್‍ನ ಗೂಂಡಾಗಳು ಕಾಣಿಸಲಿಲ್ಲವೇ ಎಂದರು.
ಕರಾವಳಿಯಲ್ಲಿ ಈ ಮೊದಲು ಬೆಂಕಿ ಹಚ್ಚುವ ಮಾತುಗಳೇ ಕೇಳಿಬರುತ್ತಿದ್ದವು. ಆದರೆ, ಮೈತ್ರಿ ಸರಕಾರ ಬಂದಾಗಿನಿಂದ ಕರಾವಳಿ ಭಾಗ ಶಾಂತಿಯುತ, ಸೌಹಾರ್ದದಿಂದ ಕೂಡಿದೆ. ಅಧಿಕಾರಿಗಳ ಮೂಲಕ ಸರಕಾರವು ಸೌಹಾರ್ದ ಮೆರೆಯುವಲ್ಲಿ ಯಶಸ್ಸನ್ನು ಕಂಡಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ನ್ನು ಬೆಂಬಲಿಸಬೇಕಿದೆ. ಕರಾವಳಿ ಪ್ರದೇಶದಲ್ಲಿ ಜನರು ಬದಲಾವಣೆ ಬಯಸುತ್ತಿದ್ದಾರೆ ಎಂದರು.
ಶಾಸಕ ಎನ್.ಎ. ಹ್ಯಾರಿಸ್ ಮಾತನಾಡಿ, ಮಿಲಿಟರಿಯನ್ನು ರಾಜಕೀಯಕ್ಕೆ ಬಳಸುವ ಮೂಲಕ ನರೇಂದ್ರ ಮೋದಿ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವಧಿಯಲ್ಲಿ ಹಲವು ಮಿಲಿಟರಿ ಸಾಧನೆಗಳನ್ನು ಮಾಡಿದ್ದರೂ ಇಂದಿರಾ ಗಾಂಧಿ ಅದನ್ನು ರಾಜಕೀಯಕ್ಕೆ ಬಳಸಿರಲಿಲ್ಲ. ಯಾವುದೇ ಅನುಭವವಿಲ್ಲದ ಅಂಬಾನಿ ಕಂಪನಿಗೆ ರಫೇಲ್ ಯುದ್ಧ ವಿಮಾನ ತಯಾರಿಸಲು ಅನುಮತಿ ನೀಡಿದ್ದಾರೆ. ಇತಿಹಾಸವುಳ್ಳ ಎಚ್‍ಎಎಲ್‍ನ್ನು ಮೂಲೆಗುಂಪು ಮಾಡಿದ್ದಾರೆ. ವಿಜಯ ಬ್ಯಾಂಕ್‍ನ ಕತ್ತು ಹಿಸುಕಿದ್ದಾರೆ. ವಿಮಾನ ನಿಲ್ದಾಣವನ್ನು ಖಾಸಗಿಯವರಿಗೆ ನೀಡಿದ್ದಾರೆ ಎಂದರು.
ಇನ್ನು ಈ ವೇಳೆ ಕಾಂಗ್ರೆಸ್ ಮುಖಂಡರಾದ ಸುರೇಶ್ ಬಳ್ಳಾಲ್, ಟಿ.ಕೆ. ಸುಧೀರ್, ಎ.ಸಿ. ವಿನಯರಾಜ್, ಜೆಡಿಎಸ್ ಮುಖಂಡರಾದ ಮುಹಮ್ಮದ್ ಕುಂಞ, ಅಕ್ಷಿತ್ ಸುವರ್ಣ ಉಪಸ್ಥಿತರಿದ್ದರು.