ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಣಿವೆ ರಾಜ್ಯ ಕಾಶ್ಮೀರದ 400ಕ್ಕೂ ಹೆಚ್ಚು ಪ್ರತ್ಯೇಕತಾವಾದಿ ನಾಯಕರುಗಳಿಗೆ ಮತ್ತೆ ಪೊಲೀಸ್ ಭದ್ರತೆ – ಕಹಳೆ ನ್ಯೂಸ್
ಶ್ರೀನಗರ – ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಣಿವೆ ರಾಜ್ಯ ಕಾಶ್ಮೀರದ 400ಕ್ಕೂ ಹೆಚ್ಚು ಪ್ರತ್ಯೇಕತಾವಾದಿ ನಾಯಕರುಗಳಿಗೆ ಮತ್ತೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಫೆ. 14ರಂದು ಉಗ್ರಗಾಮಿಗಳ ದಾಳಿಗೆ 40ಕ್ಕೂ ಹೆಚ್ಚು ಸಿಆರ್‍ಪಿಎಸ್ ಯೋಧರು ಹತರಾದ ನಂತರ ಕಣಿವೆ ರಾಜ್ಯದಲ್ಲಿ ಪ್ರತ್ಯೇಕತಾವಾದಿ ಮುಖಂಡರಿಗೆ ನೀಡಿದ್ದ ಭದ್ರತೆಯನ್ನು ಹಿಂದಕ್ಕೆ ಪಡೆಯಲಾಗಿತ್ತು.
ಆದರೆ ಲೋಕಸಭಾ ಮತ್ತು ವಿಧಾನಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ ತಮಗೆ ಭದ್ರತೆ ನೀಡಬೇಕು. ಹಿಂಸಾಚಾರ ಪೀಡಿತ ರಾಜ್ಯದಲ್ಲಿ ಚುನಾವಣಾ ಪ್ರಚಾರ ವೇಳೆ ಸೂಕ್ತ ಭದ್ರತೆ ಇಲ್ಲದಿದ್ದರೆ ಅಪಾಯ ಸಂಭವಿಸುವ ಸಾಧ್ಯತೆಯಿದೆ ಎಂದು ಅನೇಕ ಪ್ರತ್ಯೇಕತಾವಾದಿ ನಾಯಕರು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ಈ ಮನವಿಯನ್ನು ಪುರಸ್ಕರಿಸಿದ ಆಯೋಗ ಈ ನಾಯಕರಿಗೂ ಭದ್ರತೆ ಮತ್ತು ರಕ್ಷಣೆ ಒದಗಿಸುವಂತೆ ರಾಜ್ಯಪಾಲರ ಆಳ್ವಿಕೆ ಇರುವ ಜಮ್ಮು ಮತ್ತು ಕಾಶ್ಮೀರದ ಗವರ್ನರ್ ಸತ್ಯಪಾಲ್ ಮಲ್ಲಿಕ್ ಅವರಿಗೆ ಶಿಫಾರಸ್ಸು ಮಾಡಿತ್ತು.
ರಾಜ್ಯಪಾಲರು ಆದೇಶ ಹೊರಡಿಸಿ ಭದ್ರತೆ ಹಿಂದಕ್ಕೆ ಪಡೆಯಲ್ಪಟ್ಟ ನಾಯಕರಿಗೆ ಮತ್ತೆ ರಕ್ಷಣೆ ನೀಡುವಂತೆ ಸೂಚಿಸಿದರು. ಈ ದೇಶದ ಅನ್ವಯ ಮುಖ್ಯ ಕಾರ್ಯದರ್ಶಿ ಸುಬ್ರಮಣ್ಯಂ ಈ ಕ್ರಮ ಜರುಗಿಸಿದ್ದಾರೆ. ಕಳೆದ ವರ್ಷದಿಂದ ಕಣಿವೆ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಜಾರಿಯಲ್ಲಿದೆ. ಏಪ್ರಿಲ್ 11ರಿಂದ ಮೇ 6ರ ವರೆಗೆ 5 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೇ 23ರಂದು ಫಲಿತಾಂಶ ಹೊರಬರಲಿದೆ.