ಹೊಸದಿಲ್ಲಿ : ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್‌ಎಫ್) ಮುಖ್ಯಸ್ಥ ಯಾಸಿನ್ ಮಲಿಕ್ ನನ್ನು ನಿನ್ನೆ ಮಂಗಳವಾರ ರಾತ್ರಿ ಜಮ್ಮುವಿನ ಕೋಟ್ ಬಲ್ವಾಲ್ ಜೈಲಿನಿಂದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ದಿಲ್ಲಿಯ ತಿಹಾರ್ ಜೈಲಿಗೆ ತಂದಿದ್ದು ಆತನನ್ನು ಇಂದು ಗುರುವಾರ ಎನ್‌ಐಎ ಕೋರ್ಟಿಗೆ ಹಾಜರುಪಡಿಸಲಿದೆ ಎಂದು ಮೂಲಗಳು ತಿಳಿಸಿವೆ.
ಉಗ್ರ ನಿಗ್ರಹ ಕಾಯಿದೆಯಡಿ ಜೆಕೆಎಲ್‌ಎಫ್ ಮೇಲೆ ನಿಷೇಧ ಹೇರಲು ಕೇಂದ್ರ ಸರಕಾರ ನಿರ್ಧರಿಸಿದ ಬಳಿಕ ಮಲಿಕ್ ನನ್ನು ಪಿಎಸ್‌ಎ ಅಡಿ ಬಂಧಿಸಲಾಗಿದೆ.
ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ಅವರು ಜೆಕೆಎಲ್‌ಎಫ್ ಪ್ರತ್ಯೇಕತಾ ಸಂಘಟನೆಯಾಗಿದೆ ಎಂದು ಹೇಳಿದ ತರುವಾಯ ಕೇಂದ್ರ ಸರಕಾರ ಅದನ್ನು ನಿಷೇಧಿಸಲು ನಿರ್ಧರಿಸಿತ್ತು. ಭಯೋತ್ಪಾದನೆ ವಿರುದ್ಧ ಶೂನ್ಯ ಸಹನೆಯ ತನ್ನ ನೀತಿಯನ್ವಯ ಕೇಂದ್ರ ಸರಕಾರ ಜೆಕೆಎಲ್‌ಎಫ್ ಸಂಘಟನೆಯನ್ನು ನಿಷೇಧಿಸಿತ್ತು.
ಯಾಸಿನ್ ಮಲಿಕ್ ಕಾಶ್ಮೀರೀ ಪಂಡಿತರ ಜನಾಂಗೀಯ ನರಮೇಧದ ಮಾಸ್ಟರ್ ಮೈಂಡ್ ಆಗಿದ್ದ. ಮಾತ್ರವಲ್ಲದೆ ಆತ ಜಮ್ಮು ಕಾಶ್ಮೀರದ ನಾಲ್ಕು ಐಎಎಫ್ ಅಧಿಕಾರಿಗಳ ಕಗ್ಗೊಲೆಯಲ್ಲೂ ಈತ ಶಾಮೀಲಾಗಿದ್ದ. ಈತನ ಸಂಘಟನೆ ಜೆಕೆಎಲ್‌ಎಫ್ ಕಾಶ್ಮೀರಿ ಉಗ್ರರಿಗೆ ಹಣ ಪೂರೈಸುವ ಆರೋಪವನ್ನೂ ಎದುರಿಸುತ್ತಿದೆ ಎಂದು ಗೌಬಾ ಹೇಳಿದ್ದಾರೆ.