“ನಮ್ಮ ದೇಶದ ಬಗ್ಗೆ ಹೆಮ್ಮೆ ಇದೆ. ಪ್ರಪಂಚ ನಮ್ಮನ್ನು ಆಧರಿಸಿ ಗೌರವಿಸಬೇಕಾದರೆ ನಾವು ಸುಶಿಕ್ಷರಾಗಿರಬೇಕು. ಶಿಕ್ಷಣವನ್ನು ಮುಂದುವರಿಸಿ ಎಲ್ಲಾ ಸಾಧನೆಗಳಲ್ಲಿ ನೀವಿರಬೇಕು. ವಿದ್ಯಾರ್ಥಿಗಳಾದ ನೀವು ಮುಂದಿನ ಬೆಳಕು. ಎಲ್ಲಾ ವಿದ್ಯಾರ್ಥಿಗಳನ್ನು ಒಟ್ಟಿಗೆ ಈ ದೇವಸ್ಥಾನದಲ್ಲಿ ನೋಡಿ ಧನ್ಯತಾ ಭಾವ ಮೂಡಿತು” ಎಂದು ಬಾಕ್ರಬೈಲು ಶ್ರೀಸೂರ್ಯೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ರವೀಂದ್ರನಾಥ ಆಳ್ವ ಮಕ್ಕಳಿಗೆ ಶುಭ ಹಾರೈಸಿದರು.
ದಿನಾಂಕ 01/04/2019ರ ಸೋಮವಾರದಂದು ಬಾಕ್ರಬೈಲು, ಪಾತೂರು ಶ್ರೀಸೂರ್ಯೇಶ್ವರ ದೇವಸ್ಥಾನದಲ್ಲಿ , ಶ್ರೀರಾಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳೆಲ್ಲರೂ ಚಾರಣದ ಮೂಲಕ ದೇವಸ್ಥಾನ ತಲುಪಿದರು.
ಅತಿಥಿಗಳಿಗೆ ಹೂಗುಚ್ಛ ನೀಡಿ ಸಾಂಕೇತಿಕವಾಗಿ ಸ್ವಾಗತಿಸಲಾಯಿತು. ವಾಸವಿ ಹಾಗೂ ತಂಡದವರು ಪ್ರೇರಣಾ ಗೀತೆ ಹಾಡಿದರು. ನಂತರ ವಿದ್ಯಾರ್ಥಿಗಳು ಬೇಸಿಗೆ ಶಿಬಿರದ ಕುರಿತಾಗಿ ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಹತ್ತು ದಿನಗಳ ಕಾಲ ನಡೆದ ಶುಲ್ಕರಹಿತ ಈ ಬೇಸಿಗೆ ಶಿಬಿರದಲ್ಲಿ, ನೃತ್ಯ, ನಾಟಕ ಅಭಿನಯ, ವೈದ್ಯರಿಂದ ಆರೋಗ್ಯ ಸಲಹೆ, ಕುದ್ರೋಳಿ ಗಣೇಶ್ ಅವರ ಜಾದೂ ಪ್ರದರ್ಶನ, ರಾಮಕೃಷ್ಣ ಕಾಟುಕುಕ್ಕೆಯವರಿಂದ ದಾಸಕೀರ್ತನೆ, ಹರಿಕಥೆ, ಕೃಷಿ ಮಾಹಿತಿ, ಪುರಾಣ ಕಥೆ, ಯೋಗಾ, ಚಿತ್ರಕಲೆ, ಚುಟುಕು, ಕಥೆ ಹಾಗೂ ಕವನ ರಚನೆ ಮುಂತಾದವುಗಳ ಬಗ್ಗೆ ತರಬೇತಿ ನೀಡಲಾಯಿತು. ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಪ್ರೌಢ ವಿದ್ಯಾರ್ಥಿಗಳೆ ರಚಿಸಿದ ಕತೆ, ಕವನ, ಚಿತ್ರಕಲೆ ಇತ್ಯಾದಿಗಳನ್ನು ಒಳಗೊಂಡ “ಕಲಾರಾಮ” ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ|ಪ್ರಭಾಕರ್ ಭಟ್ ಕಲ್ಲಡ್ಕ, ಬಾಕ್ರಬೈಲು ಶ್ರೀಸೂರ್ಯೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಮುಖ್ಯಸ್ಥರಾದ ಮಂಜುನಾಥ ಶೆಟ್ಟಿ, ದೇವಸ್ಥಾನದ ಪವಿತ್ರ ಪಾಣಿ ಹಾಗೂ ಕೋಶಾಧಿಕಾರಿಯಾದ ಕುಶಲ್ ಕುಮಾರ್ ಪಾತೂರಾಯ ಮತ್ತು ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ, ಸಹಸಂಚಾಲಕರಾದ ರಮೇಶ್ ಇವರು ಉಪಸ್ಥಿತಿಯಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಶಮಾತ್ಮಿಕಾ ನಿರೂಪಿಸಿ, ರೋಶ್ನಿ ಸ್ವಾಗತಿಸಿ, ಸಮೀಕ್ಷಾ ವಂದಿಸಿದರು.