ಪುತ್ತೂರು: ಗ್ರಾಮಗಳನ್ನು ದತ್ತು ತೆಗೆದುಕೊಂಡು ಗ್ರಾಮದ ಜನತೆ ವೈದ್ಯಕೀಯ ಸೌಲಭ್ಯವನ್ನು ನೀಡುವ ಕೆಲಸವನ್ನು ಎಲ್ಲಾ ಸಂಘ ಸಂಸ್ಥೆಗಳು ನಡೆಸಬೇಕು. ಅದೇ ರೀತಿ ಇಲ್ಲಿ ಸಮಾಜ ಸೇವೆಯನ್ನು ನೀಡಲು ವಿವೇಕಾನಂದ ಕಾಲೇಜು ಹಾಗೂ ವಿವಿಧ ಸಂಘ-ಸಂಸ್ಥೆಗಳು ಒಟ್ಟಾಗಿ ಮುಂದಡಿ ಇಟ್ಟಿದೆ ಇದನ್ನು ಗ್ರಾಮದ ಎಲ್ಲ ಜನರು ಸದುಪಯೋಗಿಸಿಕೊಳ್ಳಬೇಕು ಎಂದು ಪುತ್ತೂರಿನ ಶ್ರೀ ಸರಸ್ವತೀ ಚಾರಿಟೇಬಲ್ ಟ್ರಸ್ಟ್‍ನ ಟ್ರಸ್ಟಿ ಪುರುಷೋತ್ತಮ ಪ್ರಭು ತಿಳಿಸಿದರು.
ಅವರು ಕುಡಿಪ್ಪಾಡಿ ದ.ಕ.ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವೇಕಾನಂದ ಕಾಲೇಜು, ಕುಡಿಪ್ಪಾಡಿ ಗ್ರಾಮ ವಿಕಾಸ ಸಮಿತಿ, ಶ್ರೀ ಸರಸ್ವತೀ ಚಾರಿಟೇಬಲ್ ಟ್ರಸ್ಟ್, ಪುತ್ತೂರು ರೋಟರಿ ಕ್ಲಬ್, ರೋಟರಿ ಕ್ಯಾಂಪ್ಕೊ ಬ್ಲಡ್ ಬ್ಯಾಂಕ್, ಭಾರತೀಯ ರೆಡ್‍ಕ್ರಾಸ್ ಸೊಸೈಟಿಯ ಸಹಯೋಗದೊಂದಿಗೆ ಮಂಗಳೂರು ಕೆ.ಎಂ.ಸಿ. ಆಸ್ಪತ್ರೆಯ ವೈದ್ಯರಿಂದ ಉಚಿತ ವೈದ್ಯಕೀಯ ಶಿಬಿರ, ರಕ್ತವರ್ಗೀಕರಣ ಸ್ವಯಂಪ್ರೇರಿತ ರಕ್ತದಾನ ಮತ್ತು ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಗುರುವಾರ ಮಾತನಾಡಿದರು.
ಇಂತಹ ಕಾರ್ಯಕ್ರಮಗಳು ಶಾಲಾ ಮಕ್ಕಳಿಂದ ಹಿಡಿದು ಗ್ರಾಮದ ಎಲ್ಲ ಜನತೆಗೆ ಮಾಹಿತಿಯನ್ನು ನೀಡುವ ಮೂಲಕ ಗ್ರಾಮೀಣ ಪ್ರದೇಶದ ಜನತೆಗೆ ವೈದ್ಯಕೀಯ ಹಾಗೂ ರಕ್ತದಾನದ ಮಹತ್ವವನ್ನು ತಿಳಿಸುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಅತ್ತಾವರ ಕೆ.ಎಂ.ಸಿ. ಆಸ್ಪತ್ರೆಯ ಆರ್ ಆ್ಯಂಡ್ ಸಿ ವಿಭಾಗದ ಹರ್ಬರ್ಟ್ ಮಾತನಾಡಿ, ರಕ್ತದೊತ್ತಡ, ಸಕ್ಕರೆ ಖಾಯಿಲೆ, ಸಾಮಾನ್ಯ ರೋಗಗಳ ಉಚಿತ ತಪಾಸಣೆಯನ್ನು ಮಾಡಲಾಗುತ್ತದೆ ಇದರ ಪ್ರಯೋಜನವನ್ನು ಎಲ್ಲರು ಪಡೆದುಕೊಳ್ಳಬೇಕು ಎಂದು ಹೇಳಿದರು.
ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಜಯರಾಮ ಭಟ್ ಎಂ.ಟಿ. ಮಾತನಾಡಿ, ಶಿಕ್ಷಣ ಸಂಸ್ಥೆಯೊಂದು ಗ್ರಾಮವನ್ನು ದತ್ತು ಪಡೆದು ಗ್ರಾಮದ ಜನತೆಗೆ ಎಲ್ಲಾ ಸೌಲಭ್ಯ, ಮಾಹಿತಿಯನ್ನು ನೀಡುವ ಕೆಲಸವನ್ನು ಮಾಡುತ್ತಿದೆ. ಇದರ ಪ್ರಯೋಜನವನ್ನು ಎಲ್ಲರು ಬಳಸಿಕೊಳ್ಳಬೇಕು ಎಂದು ಹೇಳಿದರು.
ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್‍ನ ಮೆಡಿಕಲ್ ಆಪೀಸರ್ ಡಾ. ರಾಮಚಂದ್ರ ಭಟ್ ಅವರು ರಕ್ತ ವರ್ಗೀಕರಣ ಹಾಗೂ ಯಾರೆಲ್ಲ ರಕ್ತದಾನ ಮಾಡಬಹುದು. ಇದರಿಂದ ಆಗುವ ಪ್ರಯೋಜನದ ಕುರಿತು ಮಾಹಿತಿ ನೀಡಿದರು.
ಗ್ರಾಮ ವಿಕಾಸ ಸಮಿತಿ ಅಧ್ಯಕ್ಷ ಸುಕುಮಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮ ವಿಕಾಸ ಯೋಜನೆ ಮುಖಾಂತರ ಗ್ರಾಮೀಣ ಶಾಲೆಯಲ್ಲಿ ಏರ್ಪಡಿಸಿರುವ ಈ ಕಾರ್ಯಕ್ರಮ ಯಶಸ್ವಿಯಾಗಲು ಗ್ರಾಮಸ್ಥರ ಸಹಕಾರ ಹಾಗೂ ಪ್ರೋತ್ಸಾಹ ಮುಖ್ಯವಾಗಿದೆ. ಆ ಕಾರಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಇಲ್ಲಿನ ಜನತೆಗೆ ನೀಡಲು ಸಾಧ್ಯವಾಗಿದೆ ಎಂದು ಹೇಳಿದರು.
ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಅನಂತಕೃಷ್ಣ ನಾಯಕ್, ಸರಸ್ವತೀ ಚಾರಿಟೇಬಲ್ ಟ್ರಸ್ಟ್‍ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿಪಿನ್ ಚಂದ್ರ, ಕುಡಿಪ್ಪಾಡಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿನೇಶ್ ಗೋಮುಖ, ಶಾಲಾ ಮುಖ್ಯೋಪಾಧ್ಯಾಯ ಪ್ರಕಾಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿವೇಕಾನಂದ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ. ಶಂಕರನಾರಾಯಣ ಭಟ್ ಸ್ವಾಗತಿಸಿದರು. ಸಂಸ್ಕøತ ಪ್ರಾಧ್ಯಾಪಕ ಡಾ.ಶ್ರೀಶ ಕುಮಾರ್ ಎಂ.ಕೆ. ಪ್ರಸ್ತಾವನಗೈದು ಕಾರ್ಯಕ್ರಮ ನಿರೂಪಿಸಿದರು. ಗ್ರಾಮ ವಿಕಾಸ ಸಮಿತಿ ಕಾರ್ಯದರ್ಶಿ ಮನ್ಮಥ ವಂದಿಸಿದರು.
ಉಚಿತ ವೈದ್ಯಕೀಯ ಶಿಬಿರ, ರಕ್ತದಾನ ಶಿಬಿರ
ಮಂಗಳೂರು ಕೆ.ಎಂ.ಸಿ. ಆಸ್ಪತ್ರೆಯ ವೈದ್ಯರ ತಂಡ ಶಿಬಿರದಲ್ಲಿ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಸಾಮಾನ್ಯ ರೋಗ ತಪಾಸಣೆ, ಮಕ್ಕಳಿಗೆ ಸಂಬಂಧಪಟ್ಟ ರೋಗಗಳ ತಪಾಸಣೆ, ಕಿವಿ, ಗಂಟಲು, ಮೂಗು ಸಂಬಂಧಪಟ್ಟ ಸಮಸ್ಯೆ, ಮೂಳೆ, ಸ್ತ್ರೀ ರೋಗ, ಕಣ್ಣಿನ ತಪಾಸಣೆಯನ್ನು ಉಚಿತವಾಗಿ ನಡೆಸಲಾಯಿತು.
ವೈದ್ಯಕೀಯ ಶಿಬಿರದಲ್ಲಿ ಸುಮಾರು 200 ಮಂದಿ ಭಾಗವಹಿಸಿದರು. ಸುಮಾರು 50 ಮಂದಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.