Saturday, November 16, 2024
ಸುದ್ದಿ

ದೀನರಬಾಳಿಗೆ ಬೆಳಕಾಗುವ ಮೂಲಕ “ಜೀವನದಾನ” ಮಾಡಿದ ಶ್ರೀಗಳು – ಕಹಳೆ ನ್ಯೂಸ್

ಗುರುವಿನ ಕೃಪೆಯ ಮಳೆ ಇದ್ದಾಗ ಬದುಕು ತಂಪಾಗಿರುತ್ತದೆ. ಗುರು ಇರುವವರ ಬದುಕು ತಂಪಿನಿಂದ ಕೂಡಿದ್ದರೆ, ಗುರು ಇಲ್ಲದರವರ ಬದುಕಿನಲ್ಲಿ ತಾಪ ಮಾತ್ರ ಇರುತ್ತದೆ. ಗುರು ಛಾಯೆಯಲ್ಲಿ, ಗುರುತತ್ವದ ಆಸರೆಯಲ್ಲಿ ಶಾಂತಿ ಸಮಾಧಾನ ಸದಾ ಇರಲು ಸಾಧ್ಯ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು.
ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರಮಠದಲ್ಲಿ 26ನೇ ಸನ್ಯಾಸಗ್ರಹಣ ದಿನಾಚರಣೆ ಅಂಗವಾಗಿ ನಡೆದ “ಜೀವನದಾನ” ಕಾರ್ಯಕ್ರಮದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು.
ಬದುಕಿನ ಭಾರಗಳನ್ನು, ಬಂಧನಗಳನ್ನು ಕಳೆದುಕೊಳ್ಳುವಂತಹದ್ದು ಸಂನ್ಯಾಸ. ಶಿಷ್ಯ ಭಕ್ತರ ಅಪೇಕ್ಷೆಯಂತೆ ಕುಟುಂಬದ ದೀಪವನ್ನು ಹಚ್ಚಿ ಸಂನ್ಯಾಸ ಸ್ವೀಕಾರ ದಿನವನ್ನು ಆಚರಿಸುವ ಜತೆಗೆ ಅಭಯವನ್ನು ನೀಡಲಾಗುತ್ತಿದೆ. ದೀಪವನ್ನು ಆರಿಸಿ ಹಾಗೂ ದೀಪವನ್ನು ಬೆಳಗಿ ಜನ್ಮದಿನವನ್ನು ಆಚರಿಸುವ ಪದ್ಧತಿ ಇದೆ. ಆದರೆ ನಾವು ಸಂನ್ಯಾಸ ಸ್ವೀಕರಿಸಿದ ದಿನವನ್ನು ದೀನರಬಾಳಿಗೆ ಬೆಳಕಾಗುವ ಮೂಲಕ ಆಚರಿಸಿಕೊಳ್ಳುತ್ತಿದ್ದೇವೆ. ಪ್ರತಿ ವರ್ಷ ಸಂನ್ಯಾಸಗ್ರಹಣದಿನವನ್ನು ‘ಜೀವನದಾನ’ ದಿನವಾಗಿ ಆಚರಿಸುತ್ತಿದ್ದು, ಆ ದಿನ ಕಷ್ಟದಲ್ಲಿ ಇರುವ ಕುಟುಂಬಕ್ಕೆ ಅಗತ್ಯವಾದ ಸಹಾಯವನ್ನು ಮಾಡುವುದರಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದರು.
ಶ್ರೀ ಮಠದ ಜೀವನದಾನ ಟ್ರಸ್ಟ್ ಮೂಲಕ ಬದುಕು ನಡೆಸಲಸಾಧ್ಯದ ಬಡ ಕುಟುಂಬದ ಜವಾಬ್ದಾರಿಯನ್ನು ನೋಡಿಕೊಳ್ಳುವ ಕಾರ್ಯಕ್ರಮದ ಅಂಗವಾಗಿ ಹೊನ್ನಾವರದ ಕಡ್ಲೆಯ ಗೋವಿಂದ ಹೆಗಡೆ ಅವರ ಕುಟುಂಬಕ್ಕೆ ಜೀವನದಾನ ನೀಡಲಾಯಿತು. ಮಹಾಪಾದುಕೆ ನಿರ್ಮಾಣ ಮಾಡಿದ ಶಿಲ್ಪಿ ಸದಾಶಿವ ಗುಡಿಯಾರ್, ಕೆಲಸದ ಉಸ್ತುವಾರಿ ನೋಡಿಕೊಂಡ ಮುರಳಿಕೃಷ್ಣ ಮಾನಸವನ ಅವರನ್ನು ಗೌರವಿಸಲಾಯಿತು.
ಪದ್ಮಭೂಷಣ ಡಾ.ಗಿರೀಶ ಭಾರದ್ವಾಜ, ಶ್ರೀ ಮಠದ ಕಾರ್ಯನಿರ್ವಾಹಕ ಅಧಿಕಾರಿ ಕೆ. ಜಿ. ಭಟ್, ಹವ್ಯಕ ಮಹಾಮಂಡಲ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಕಾರ್ಯದರ್ಶಿ ಹರಿಪ್ರಸಾದ್ ಪೆರಿಯಾಪ್ಪು, ಜೀವನದಾನ ಮತ್ತು ಯೋಗಪಟ್ಟಾಭಿಷೇಕ ದಿನ ಆಯೋಜನ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್, ಆಯೋಜನ ಸಮಿತಿ ಪ್ರಧಾನ ಕಾರ್ಯದರ್ಶಿ ಸೇರಾಜೆ ಸುಬ್ರಹ್ಮಣ್ಯ ಭಟ್, ಕೋಶಾಧಿಕಾರಿ ಬಂಗಾರಡ್ಕ ಜನಾರ್ದನ ಭಟ್, ಗಣೇಶ್ ಭಟ್ ಮೈಕೆ ಮತ್ತು ಮಠದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮುಳ್ಳೇರಿಯ ಮಂಡಲ ಕೋಶಾಧಿಕಾರಿ ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ, ಯು. ಎಸ್. ವಿಶ್ವೇಶ್ವರ ಭಟ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಪಾದುಕಾ ಪ್ರದಾನ ಯಕ್ಷಗಾನ ತಾಳಮದ್ದಳೆ ನಡೆಯಿತು. ಕಲಾವಿದರಾಗಿ ಕುರಿಯ ಗಣಪತಿ ಶಾಸ್ತ್ರಿ, ಉಮಾಕಾಂತ ಭಟ್ ಮೇಲುಕೋಟೆ, ಮೋಹನ ಭಾಸ್ಕರ ಹೆಗಡೆ, ಅಂಬಾಪ್ರಸಾದ ಪಾತಾಳ ಮತ್ತಿತರರು ಭಾಗವಹಿಸಿದರು.
ಮಹಾ ಪಾದುಕೆ ಪ್ರತಿಷ್ಠೆ:
ಮಾಣಿಮಠದ ಆವರಣದಲ್ಲಿ ಸ್ಥಾಪನೆಯಾದ ಶಿಲಾಮಯವಾದ ಶಂಕರರ ಮಹಾಪಾದುಕೆಯನ್ನು ವೇಣೂರು, ಗುರುವಾಯನಕೆರೆ, ಉಪ್ಪಿನಂಗಡಿ, ಪುತ್ತೂರು ಮಾರ್ಗವಾಗಿ ಭವ್ಯ ಶೋಭಾಯಾತ್ರೆ ಮೂಲಕ ಪೆರಾಜೆ ಮಠಕ್ಕೆ ತಂದು, ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಮಾಣಿಮಠದಲ್ಲಿ ಮಹಾಪಾದುಕೆ ಸ್ಥಾಪನೆ ಧಾರ್ಮಿಕ ವಿಧಿವಿಧಾನದ ಮೂಲಕ ನಡೆಯಿತು.
 
5000 ದಂಪತಿಗಳಿಂದ ನಾಳೆ ಮಹಾಪಾದುಕಾ ಪೂಜೆ:
ಕುಮಟಾ – ಹೊನ್ನಾವರ – ಶಿವಮೊಗ್ಗ – ಮಂಗಳೂರು – ಹುಬ್ಬಳ್ಳಿ- ಕೊಡಗು- ಸಿದ್ದಾಪುರ- ಕಾಸರಗೋಡು – ಪುಣೆ – ಮುಂಬಯಿ ಹಾಗೂ ಚೆನೈ ಸೇರಿದಂತೆ ರಾಜ್ಯ ಹೊರರಾಜ್ಯಗಳ ಸುಮಾರು 5000 ದಂಪತಿಗಳು ಶ್ರೀಶಂಕರಾಚಾರ್ಯರ ಪಾದುಕೆಗಳಿಗೆ ಪೂಜೆ ಸಲ್ಲಿಸಲಿದ್ದಾರೆ. ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ 26ನೇ ಯೋಗಪಟ್ಟಾಭಿಷೇಕ ದಿನಾಚರಣೆಯ ಪ್ರಯುಕ್ತ ಈ ಕಾರ್ಯಕ್ರಮ ಸಂಪನ್ನವಾಗುತ್ತಿದ್ದು, ಶಂಕರರ ಪಾದುಕಾಪೂಜೆಯ ಮೂಲಕ ಗುರುಪರಂಪರೆಗೆ ಶ್ರದ್ಧಾಭಕ್ತಿಯನ್ನು ಸಲ್ಲಿಸಲಿದ್ದಾರೆ. ಕಳೆದ 25 ವರ್ಷಗಳಿಂದ ಸಮಾಜಕ್ಕೆ ನಿರಂತರ ಮಾರ್ಗದರ್ಶನ ಮಾಡುತ್ತಾ, ಗೋಸಂರಕ್ಷಣೆ ಸೇರಿದಂತೆ ವಿವಿಧ ಪ್ರಾಕಾರಗಳಲ್ಲಿ ನಾಡಿನ ಹಿತಚಿಂತನೆಯಲ್ಲಿ ತೊಡಗಿಸಿಕೊಂಡಿರುವ ಪೂಜ್ಯ ಗುರುಗಳ 26ನೇ ವರ್ಷದ ಯೋಗಪಟ್ಟಾಭಿಷೇಕ ದಿನದಂದು ಸಹಸ್ರ ಸಹಸ್ರ ಶಿಷ್ಯಭಕ್ತರು ಧನ್ಯತೆಯ ಭಾವ ಸಮರ್ಪಣೆ ಮಾಡಲಿದ್ದಾರೆ.  ಮಹಾಪಾದುಕಾಪೂಜೆಯಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ರಜತ ಪಾದುಕೆಯನ್ನು ಪ್ರಸಾದ ರೂಪದಲ್ಲಿ ಶ್ರೀಗಳು ನೀಡಿ ಹರಸಲಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು