Saturday, November 16, 2024
ಸುದ್ದಿ

ಮೂಲಭೂತ ಸೌಕರ್ಯ ಒದಗಿಸದ ಹಿನ್ನೆಲೆ – ಗ್ರಾಮಸ್ಧರಿಂದ ಮತದಾನ ಬಹಿಷ್ಕಾರ – ಕಹಳೆ ನ್ಯೂಸ್

ಮೂಲಭೂತ ಸೌಕರ್ಯ ಒದಗಿಸದ ಹಿನ್ನೆಲೆಯಲ್ಲಿ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಸಿದ ಘಟನೆ ಕಾರವಾರ ತಾಲೂಕು ಚಿತ್ತಾಕುಲದ ನಾಕುದಮೊಹಲ್ಲಾದ ಗ್ರಾಮದಲ್ಲಿ ನಡೆದಿದೆ.

ಕಳೆದ ನಾಲ್ಕೈದು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿರುವ ಬಗ್ಗೆ ಮತ್ತು ರಸ್ತೆ ಸೇರಿದಂತೆ ಇನ್ನಿತರ ಮುಲಭೂತ ಸೌಕರ್ಯಗಳಿಲ್ಲದ ಕಾರಣ ಲೋಕಸಭಾ ಚುನಾವಣೆ ಬಹಿಷ್ಕರಿಸುವುದಾಗಿ ಇಲ್ಲಿನ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಎಚ್ಚೆತ್ತುಕೊಂಡ ಕಾರವಾರ ತಹಶಿಲ್ದಾರ್, ಪಿಡಿಒ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರನ್ನೊಳಗೊಂಡ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ತಂಡ ಗ್ರಾಮಕ್ಕೆ ತೆರಳಿ ಸ್ಥಳೀಯರ ಅಹವಾಲುಗಳನ್ನು ಆಲಿಸಿದ್ದಾರೆ. ಈ ವೇಳೆ ಗ್ರಾಮದ ಸಮಸ್ಯೆ ಬಗ್ಗೆ ಮಾತನಾಡಿದ ಫಕ್ರುದ್ದಿನ್ ದಾವುದ್, ಕಳೆದ ಹಲವು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಇದ್ದು, ಇತ್ತೀಚೆಗೆ ಅದು ಮತ್ತು ಉಲ್ಬಣಗೊಂಡಿದೆ. ಇಲ್ಲಿರುವ ಬಾವಿಗಳಿಗೆ ಉಪ್ಪು ನೀರು ಸೇರುತ್ತಿದ್ದು, ಕುಡಿಯಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಇದೀಗ ಗ್ರಾಮಸ್ಥರೆಲ್ಲರೂ ಮಸಿದಿ ಬಾವಿಯಿಂದ ಮಾತ್ರ ಕುಡಿಯಲು ನೀರು ತೆಗೆದುಕೊಳ್ಳುವ ಪರಿಸ್ಥಿತಿ ಇದೆ. ಆದರೆ ಇದು ಕೂಡ ಕೆಲ ದಿನಗಳಲ್ಲಿ ಬತ್ತುವ ಕಾರಣ ತಾವು ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದಾಗಿ ಅಧಿಕಾರಿಗಳಿಗೆ ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೇ ವೇಳೆ ಸ್ಥಳೀಯರು ಗ್ರಾಮಕ್ಕೆ ರಸ್ತೆ ಇಲ್ಲದ ಬಗ್ಗೆ ಮತ್ತು ಮಳೆಗಾಲದಲ್ಲಿ ನೀರು ಹರಿದು ಹೋಗುವ ಜಾಗದಲ್ಲಿ ಜಮೀನಿನ ಮಾಲೀಕರೊಬ್ಬರು ಕಂಪೌಂಡ್ ನಿರ್ಮಾಣ ಮಾಡಿರುವ ಬಗ್ಗೆ ತಿಳಿಸಿದ್ದು, ಸಮಸ್ಯೆ ಬಗೆ ಹರಿಸಿದರೆ ಮತದಾನ ಮಾಡುವುದಾಗಿ ಹೇಳಿದರು. ಅಹವಾಲು ಆಲಿಸಿ ಮಾತನಾಡಿದ ತಹಶಿಲ್ದಾರ್, ಮೂಲಭೂತ ಸೌಕರ್ಯ ಅವಶ್ಯವಾಗಿ ಒದಗಿಸಬೇಕು. ಆದರೆ ಈ ಕಾರಣಕ್ಕೆ ಚುನಾವಣೆ ಬಹಿಷ್ಕರಿಸುವುದು ಸರಿಯಲ್ಲ. ಮತದಾನ ಮಾಡುವುದು ಪ್ರತಿಯೊಬ್ಬರ ಹಕ್ಕು. ನಿಮ್ಮ ಸಮಸ್ಯೆಗಳ ಬಗ್ಗೆ ಈಗಾಗಲೇ ನೀಡಿದ ದೂರನ್ನು ಪಿಡಿಒ ಹಾಗೂ ಗ್ರಾ.ಪಂ ಅಧ್ಯಕ್ಷರು ಪರಿಶೀಲಿಸಿದ್ದಾರೆ. ಮಳೆಗಾಲದಲ್ಲಿ ನೀರು ಸುಲಲಿತವಾಗಿ ಹರಿಯಲು ಅವಕಾಶ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡುವಂತೆ ಅರಿವು ಮೂಡಿಸಿದರು. ಇದಕ್ಕೆ ಒಪ್ಪಿ ಮತದಾನ ಮಾಡುವುದಾಗಿ ಗ್ರಾಮಸ್ಥರು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು