Friday, November 15, 2024
ಸುದ್ದಿ

ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರತಿಭಾ ದಿನಾಚರಣೆ – ಕಹಳೆ ನ್ಯೂಸ್

ಪುತ್ತೂರು: ಪ್ರತಿಯೊಬ್ಬರನ್ನೂ ಗುರುತಿಸುವುದು ಅವರ ವ್ಯಕ್ತಿತ್ವ ಹಾಗೂ ನಡತೆಯ ಆಧಾರದ ಮೇಲೆ. ನಮ್ಮ ಪ್ರತಿಯೊಂದು ಕಾರ್ಯ ನಮ್ಮ ವ್ಯಕ್ತಿತ್ವನ್ನು ಉತ್ತಮ ಪಡಿಸುವಲ್ಲಿ ಸಹಕರಿಸಬೇಕು. ಏಕೆಂದರೆ ಮುಂದೊಂದು ದಿನ ನಮ್ಮ ವ್ಯಕ್ತಿತ್ವ ಹಾಗೂ ನಡತೆ ನಮಗೆ ಸಮಾಜದಲ್ಲಿ ಅಂತಸ್ತು ಹಾಗೂ ಗೌರವವನ್ನು ತಂದುಕೊಡುತ್ತದೆ. ಯಾವಾಗ ಮನುಷ್ಯ ತನ್ನ ವ್ಯಕ್ತಿತ್ವ ಹಾಗೂ ನಡತೆಯನ್ನು ಕಳೆದುಕೊಳ್ಳುತ್ತಾನೋ ಅಂದು ಅವನು ಸಮಾಜ ಕಣ್ಣಿನಲ್ಲಿ ನಿಕೃಷ್ಟನೆನಿಸಿಕೊಳ್ಳುತ್ತಾನೆ ಎಂದು ಸುರತ್ಕಲ್‍ನ ಎನ್.ಐ.ಟಿ.ಕೆ. ನಿರ್ದೇಶನ ಮಂಡಳಿ ಅಧ್ಯಕ್ಷ, ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಕೆ. ಬಾಲವೀರ ರೆಡ್ಡಿ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಇಲ್ಲಿನ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕ ದಿನದ ಅಂಗವಾಗಿ ಗುರುವಾರ ನಡೆದ ಪ್ರತಿಭಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಾಲ್ಕು ವರ್ಷಗಳ ಕಾಲೇಜು ಓದು ಮುಂದಿನ ನಲವತ್ತು ವರ್ಷಗಳ ಉದ್ಯೋಗದ ಬದುಕಿಗೆ ಬುನಾದಿಯಾಗಬೇಕು. ಪ್ರತಿಭೆ ಎನ್ನುವುದು ವಿಶಿಷ್ಟ ಕ್ರಿಯಾಶೀಲತೆಯ ಪ್ರದರ್ಶನ. ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಬೆಳೆಸುವಲ್ಲಿ ಉಪನ್ಯಾಸಕರ ಪಾತ್ರ ಮಹತ್ವದ್ದು. ವಿದ್ಯಾರ್ಥಿಗಳನ್ನು ಅವರ ಪ್ರತಿಭೆಯನ್ನು ಗುರುತಿಸಿಕೊಳ್ಳಲು ವೇದಿಕೆಯನ್ನು ಕಲ್ಪಿಸಬೇಕು. ನಿರ್ಧಾರಗಳನ್ನು ಸ್ವತಂತ್ರ್ಯವಾಗಿ ತೆಗೆದುಕೊಳ್ಳುವ ಧೈರ್ಯ ಬೆಳೆಸಬೇಕು. ಸಮಯ ನಿರ್ವಹಣೆ, ಕಾರ್ಯಕ್ರಮ ಮೊದಲಾದವುಗಳ ಸ್ವತಂತ್ರವಾಗಿ ನಿರ್ವಹಿಸಬಲ್ಲ ಸಾಮಥ್ರ್ಯ ವೃದ್ಧಿಸುವುದು ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂದರ್ಭಗಳನ್ನು ನಿರ್ವಹಿಸಲು ಸಾಧ್ಯವಾಗದೆ ಉದ್ಯೋಗ ಜೀವನದಲ್ಲಿ ಸೋಲುತ್ತಿರುವವರು ಅನೇಕ. ಎಲ್ಲಾ ತಿಳಿದಿದ್ದು ವಿಷಯ ಮಂಡನೆ ಸಂದರ್ಭದಲ್ಲಿ ಪದಗಳಿಗಾಗಿ ಪರದಾಡುವುದು ಸರ್ವೇ ಸಾಮಾನ್ಯವಾಗುತ್ತಿದೆ. ಇದಕ್ಕೆಲ್ಲಾ ಕಾರಣ ಆತ್ಮವಿಶ್ವಾಸ ಕೊರತೆ ಹಾಗೂ ಸಂದರ್ಭ ನಿರ್ವಹಣೆ ಕೌಶಲ್ಯದ ಕೊರತೆ. ಕಂಡ ಕನಸನ್ನು ಈಡೇರಿಸಿಕೊಳ್ಳುವಲ್ಲಿಯೂ ಈ ಸಮಸ್ಯೆ ಯಕ್ಷ ಪ್ರಶ್ನೆಯಾಗಿ ಕಾಡುತ್ತದೆ ಎಂದು ನುಡಿದರು.

ಕನಸು ಕಾಣುವುದು ಸುಲಭ ಆದರೆ ಅದನ್ನು ಈಡೇರಿಸುವ ಸಂದರ್ಭದಲ್ಲಿ ಕಠಿಣ ಪರಿಶ್ರಮ, ಹೇಳಿದ್ದನ್ನು ಮಾಡಿ ತೋರಿಸುವ ಛಲ ಮುಖ್ಯ. ಇದರೊಂದಿಗೆ ನಮ್ಮಲ್ಲಿ ಹುದುಗಿರುವ ಪ್ರತಿಭೆಯನ್ನು ಗುರುತಿಸಿಕೊಂಡು ಅದನ್ನು ನಮಗೆ ಅಗತ್ಯವಿರುವಂತೆ ಪಳಗಿಸಿ ಬೆಳೆಸಿಕೊಳ್ಳಬೇಕು. ಕೆಲವೊಮ್ಮೆ ಒಬ್ಬನ ಕೈಯಿಂದ ಏನೂ ಸಾಧ್ಯವಿಲ್ಲ ಎನಿಸಬಹುದು, ಆದರೆ ಒಗ್ಗಟ್ಟಾಗಿ ಪ್ರಯತ್ನಿಸಿದಾಗ ಯಶಸ್ಸು ಕಟ್ಟಿಟ್ಟ ಬುತ್ತಿ. ಪ್ರಯತ್ನಿಸದೇ ಯಾವುದೇ ಕೆಲಸ ಸಾಧ್ಯವಿಲ್ಲ ಎನ್ನುವುದು ಉಜ್ವಲ ಭವಿಷ್ಯದ ದಿಕ್ಕಿಗೆ ಬೆನ್ನು ತೋರಿಸಿದಂತೆ ಎಂದು ತಿಳಿಸಿದರು.

ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಎಸ್. ಗೋವಿಂದೇ ಗೌಡ, ಕ್ಯಾಂಪಸ್ ಡೈರೆಕ್ಟರ್ ಪ್ರೊ. ವಿವೇಕ್ ರಂಜನ್ ಭಂಡಾರಿ, ಕಾರ್ಯಕ್ರಮದ ಸಂಯೋಜಕ ಭಾಸ್ಕರ್ ಕುಲಕರ್ಣಿ, ಕ್ರೀಡಾ ಸಂಯೋಜಕ ಬಾಲಚಂದ್ರ ಗೌಡ, ಚಿಲುಮೆ ಸಂಯೋಜಕ ಸುದರ್ಶನ್ ಎಂ.ಎಲ್. ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ತನ್ವಿ ಡಿ.ಐ. ‘ಚಿಲುಮೆ’ ವರದಿಯನ್ನು ಹಾಗೂ ಮಹಮ್ಮದ್ ಯೂಸುಫ್ ಕ್ರೀಡಾ ವರದಿಯನ್ನು ವಾಚಿಸಿದರು. ಈ ವಿಭಾಗದ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಸಫ್ವಾನ, ತೇಜಸ್ವಿನಿ, ಕೀರ್ತನ್ ಹಾಗೂ ಆದರ್ಶ ಎಸ್. ಪಿ. ನಿರ್ವಹಿಸಿದರು. ವಿದ್ಯಾರ್ಥಿನಿ ಸುಶ್ಮಿತಾ ಬಿ. ಅಭ್ಯಾಗತರ ಪರಿಚಯವನ್ನು ಮಾಡಿದರು. ವಿದಾರ್ಥಿನಿಯರಾದ ಅನ್ವಿತಾ ಭಟ್, ಮೇಘಾ ತಾರಾ ಕಿಣಿ ಪ್ರಾರ್ಥಿಸಿದರು. ಪ್ರೀತಿಕಾ ರೈ ಸ್ವಾಗತಿಸಿ, ಕೇತನ್ ದಾಮ್ಲೆ ವಂದಿಸಿದರು. ಲೀನಾ ಎಚ್.ಎಂ. ಹಾಗೂ ಪ್ರತೀಕ್ಷಾ ಸಿ. ರೈ ಕಾರ್ಯಕ್ರಮ ನಿರೂಪಿಸಿದರು.