ಪುತ್ತೂರು: ಪ್ರಸ್ತುತ ನೀರಿನ ಕೊರತೆ ದೇಶದೆಲ್ಲೆಡೆ ಎದುರಿಸುತ್ತಿದ್ದೇವೆ. ಅದರಲ್ಲೂ ಶುದ್ಧ ಕುಡಿಯವ ನೀರಿನ ಆಹಾಕಾರ ಎಲ್ಲೆಡೆ ಇದೆ. ಇಂದು ಮನುಷ್ಯರು ಹೆಚ್ಚಾಗಿ ರೋಗಗಳಿಂದ ಬಳಲು ಕಾರಣ ನಾವು ಬಳಸುವ ನೀರು. ಹಾಗಾಗಿ ಕುಡಿಯುವ ನೀರಿನ ಬಗ್ಗೆ ಎಚ್ಚರವಹಿಸುವುದು ಮುಖ್ಯ. ಪ್ರತಿ ವರ್ಷ ಕುಡಿಯುವ ನೀರಿನ ಗುಣಮಟ್ಟವನ್ನು ಪರೀಕ್ಷಿಸಲಾಗುತ್ತದೆ. ಆದರೆ ಇಂದು ಈ ಜೀವಜಲವನ್ನು ಹಣವನ್ನು ನೀಡಿ ಕೊಂಡುಕೊಳ್ಳವ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ ಎಂದು ವಿವೇಕಾನಂದ ಮಹಾವಿದ್ಯಾಲಯದ ಸಂಸ್ಕೃತ ಪ್ರಾಧ್ಯಾಪಕ ಡಾ.ಶ್ರೀಶ ಕುಮಾರ್ ಎಂ.ಕೆ. ಹೇಳಿದರು.
ಅವರು ಕುಡಿಪ್ಪಾಡಿ ದ.ಕ.ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ರಸಾಯನ ಶಾಸ್ತ್ರ ವಿಭಾಗ ಮತ್ತು ಗ್ರಾಮ ವಿಕಾಸ ಸಮಿತಿಯ ಜಂಟಿ ಆಶ್ರಯದಲ್ಲಿ ಜೀವಜಲ ಮಹತ್ವ ಮತ್ತು ಸಂರಕ್ಷಣೆ ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯದ ಅನೇಕ ಭಾಗದಲ್ಲಿ ನೀರಿನ ಕೊರತೆ ಇದೆ. ಅದನ್ನು ಪರಿಹರಿಸುವ ಕಾರ್ಯ ಹಳ್ಳಿಗಳಿಂದ ನಡೆಯಬೇಕಿದೆ. ನಮ್ಮ ಊರಿನಲ್ಲೇ ಶುದ್ಧ ಕುಡಿಯುವ ನೀರು ಲಭಿಸುತ್ತಿಲ್ಲ. ಇತಂಹ ಸ್ಥಿತಿಯಲ್ಲಿ ಬಾವಿಗಳನ್ನು ಮುಚ್ಚುವ ಸ್ಥಿತಿ ಬಂದಿದೆ. ಇದಕ್ಕೆ ಮಳೆಗಾಲದಲ್ಲಿ ಇಂಗು ಗುಡಿಗಳನ್ನು ತೆಗೆಯುವ ಮೂಲಕ ನೀರನ್ನು ಭೂಮಿಗೆ ಇಂಗಿಸುವ ಕಾರ್ಯವನ್ನು ಮಾಡಬೇಕು. ಮನುಷ್ಯ ಹುಟ್ಟಿದಾಗಿನಿಂದ ಸಾಯುವ ತನಕ ನೀರು ಅತೀ ಮುಖ್ಯವಾಗಿದೆ ಎಂದು ಹೇಳಿದರು.
ಗ್ರಾಮ ವಿಕಾಸ ಸಮಿತಿ ಅಧ್ಯಕ್ಷ ಸುಕುಮಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ನೀರಿನ ಮಹತ್ವವನ್ನು ತಿಳಿಯಲು ಇದೊಂದು ಮುಖ್ಯವಾದ ವೇದಿಕೆಯಾಗಿದೆ. ನೀರು ಬಹಳ ಮುಖ್ಯ ನಮ್ಮ ಜಲಚರಗಳಿಗೆ ನೀರು ಒಂದು ವಾಸಸ್ಥಾನ, ಆ ನೀರಿನಲ್ಲೇ ವಾಸಿಸುವ ಅವುಗಳಿಗೆ ವಿಷಕಾರಿ ಅಂಶವನ್ನು ಹಾಕುವ ಕಾರ್ಯವನ್ನು ನಾವು ಮಾಡಬಾರದು. ಶುದ್ಧ ನೀರನ್ನು ಕುಡಿಯುವ ಮೂಲಕ ಆರೋಗ್ಯವನ್ನು ಕಾಪಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಗ್ರಾಮದ ಸುಮಾರು ನೂರು ಮನೆಯ ಕುಡಿಯುವ ನೀರನ್ನು ತಪಾಸಣೆಗೆ ಒಳಪಡಿಸಲಾಯಿತು.
ಗ್ರಾಮ ವಿಕಾಸದ ಉಪಾಧ್ಯಕ್ಷ ರಾಮಜೋಯಿಸ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿನೇಶ್ ಗೋಮುಖ, ಶಾಲೆಯ ಮುಖ್ಯೋಪಾಧ್ಯಾಯ ಪ್ರಕಾಶ್ ಮತ್ತಿತರರು ಉಪಸ್ಥಿತರಿದರು. ಡಾ. ಕಾರಂತ ವಿಜಯ ಗಣಪತಿ ರಮೇಶ್ ಕಾರ್ಯಕ್ರಮ ನಿರೂಪಿಸಿದರು.