ಪುತ್ತೂರು: ಎಲ್ಲಾ ಭಾಷೆಗಳಿಗಿಂತ ಮೊದಲ ಇದ್ದ ಭಾಷೆ ತುಳು. ಯಾವುದೇ ಒಂದು ಭಾಷೆ ಮೊದಲ ಸ್ಥಾನದಲ್ಲಿ ಇದ್ದರೆ ಸಂಸ್ಕೃತಿ ಕೂಡಾ ಮೊದಲಾಗಿರುತ್ತದೆ. ವಿದೇಶಿಗರು ಕೂಡ ತುಳು ಭಾಷೆಯ ಬಗ್ಗೆ ಆಸಕ್ತಿಯನ್ನು ಹೊಂದಿದ್ದಾರೆ. ಹೀಗಿರುವಾಗ ಅದನ್ನು ಬೆಳೆಸಿಕೊಂಡು, ಉಳಿಸಿಕೊಂಡು ಹೋಗುವ ಕರ್ತವ್ಯ ನಮ್ಮದು ಎಂದು ನಿವೃತ ಕಂದಾಯ ಅಧಿಕಾರಿ ತಮ್ಮಯ್ಯ ಹೇಳಿದರು.
ಅವರು ವಿವೇಕಾನಂದ ಕಾಲೇಜಿನ ತುಳು ಸಂಘ ಹಾಗೂ ಪಾರಂಪರಿಕ ಕೂಟ ಗುರುವಾರ ಆಯೋಜಿಸಿದ್ದ ಸರ್ಟಿಫಿಕೇಟ್ ಕೋರ್ಸ್ನ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ತುಳುನಾಡಿನವರಾದ ನಾವು ತುಳು ಲಿಪಿ ಕಲಿತು ಸ್ನೇಹಿತರಿಗೂ ಹಾಗೂ ನೆರೆಹೊರೆಯವರಿಗೂ ಕಲಿಸಬೇಕು. ಕಲಿತ ವಿದ್ಯೆಯನ್ನು ಶಿಕ್ಷಣ ಮುಗಿದ ನಂತರ ಮರೆತು ಬಿಡದೆ ಅದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ. ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂವಹನಕ್ಕೆ ಭಾಷೆ ಬಹಳ ಮುಖ್ಯ. ಮಾತೃ ಭಾಷೆ ಹೃದಯಕ್ಕೆ ಹತ್ತಿರವಾದದ್ದು ಆದ್ದರಿಂದ ಅದೇ ಭಾಷೆಯಲ್ಲಿ ಶಿಕ್ಷಣವನ್ನು ನೀಡಿದರೆ ವಿದ್ಯಾರ್ಥಿಗಳು ಬೇಗ ಅರ್ಥಮಾಡಿಕೊಳ್ಳುತ್ತಾರೆ. ಇದು ವೈಜ್ಞಾನಿಕವಾಗಿ ಸಾಬೀತಾಗಿದೆ. ಮಾತೃ ಭಾಷೆಯಲ್ಲಿ ಶ್ರೀಮಂತಿಕೆ ಇದೆ. ತುಳು ಭಾಷೆಯಲ್ಲಿ ತುಂಬಾ ಅವಕಾಶಗಳು ಇವೆ. ಸಿಕ್ಕಂತಹ ಅವಕಾಶಗಳನ್ನು ಸದುಪಯೋಗಿಸಿಕೊಂಡರೆ ಜ್ಞಾನವನ್ನು ಹೆಚ್ಚಿಸಬಹುದು ಎಂದು ಹೇಳಿದರು.
ತುಳು ಲಿಪಿಯ ಕುರಿತು ತರಬೇತಿ ನೀಡಿದ ನಿವೃತ ಕಂದಾಯ ಅಧಿಕಾರಿ ತಮ್ಮಯ್ಯ ಹಾಗೂ ವಿದ್ಯಾರ್ಥಿ ಶ್ರೀಕಾಂತ್ ಅವರನ್ನು ಸನ್ಮಾನಿಸಲಾಯಿತು.
ಐಕ್ಯುಎಸಿ ಸಂಯೋಜಕ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ಎಚ್.ಜಿ. ಉಪಸ್ಥಿತರಿದ್ದರು.
ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ನಾಯ್ಕ್ ಪ್ರಾಸ್ತವಿಸಿ, ಸ್ವಾಗತಿಸಿದರು. ಇತಿಹಾಸ ವಿಭಾಗದ ಉಪನ್ಯಾಸಕಿ ವಿಜಯಲಕ್ಷ್ಮೀ ವಂದಿಸಿದರು. ತುಳು ಸಂಘದ ಸಂಯೋಜಕ ಡಾ. ವಿಷ್ಣು ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.