ರಾಜ್ಯದಲ್ಲಿ ಮೊದಲ ಹಂತದ ಮತದಾನಕ್ಕೆ ದಿನಗಣನೆ ಪ್ರಾರಂಭವಾಗಿದೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು. ಒಂದು ಕಡೆ ಸುಮಲತಾ ಅಂಬರೀಶ್ ಆದರೆ ಇನ್ನೊಂದು ಕಡೆ ನಿಖಿಲ್ ಜಟಾಪಟಿ ಜೋರಾಗಿಯೇ ಇದೆ. ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯನ್ನು ಶತಾಯಗತಾಯ ಗೆಲ್ಲಿಸಲು ಹಲವು ತಂತ್ರಗಳನ್ನು ಹೆಣೆಯುತ್ತಿದ್ದು ಇದೀಗ ಖುದ್ದು ರಾಹುಲ್ ಗಾಂಧಿಯೇ ಅಖಾಡಕ್ಕಿಳಿಯುವ ಸೂಚನೆಯಿದೆ.
ನಾಡಿದ್ದು ಶನಿವಾರ ರಾಜ್ಯದಲ್ಲಿ ಮತ ಯಾಚನೆಗೆ ಆಗಮಿಸಲಿರುವ ರಾಹುಲ್ ಗಾಂಧಿ ಕೆ.ಆರ್ ನಗರದಲ್ಲಿ ಕಾಂಗ್ರೆಸ್-ಜೆಡಿಎಸ್ ಜಂಟಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕೆ.ಆರ್ ನಗರದಲ್ಲಿ ಸುಮಲತಾ ಅಂಬರೀಷ್‍ಗೆ ಪ್ರಚಾರದ ವೇಳೆ ಭರ್ಜರಿ ಪ್ರತಿಕ್ರಿಯೆ ಮತದಾರರಿಂದ ಸಿಕ್ಕಿತ್ತು. ಇದನ್ನು ಸೆಳೆಯಲು ಜೆಡಿಎಸ್ ಇಲ್ಲಿ ಕಾರ್ಯತಂತ್ರ ಹೆಣೆದಿದೆ ಎನ್ನಲಾಗುತ್ತಿದೆ. ಇದಕ್ಕಾಗಿ ಸಿಎಂ ಕುಮಾರಸ್ವಾಮಿಯವರು ರಾಹುಲ್ ಗಾಂಧಿಯವರನ್ನೇ ತಮ್ಮ ಮಗನ ಪರವಾಗಿ ಪ್ರಚಾರ ನಡೆಸಬೇಕೆಂದು ಖುದ್ದಾಗಿ ಆಹ್ವಾನ ಕೊಟ್ಟಿದ್ದಾರೆ.
ಕಳೆದೆರಡು ದಿನಗಳಿಂದ ಸಿಎಂ ಕುಮಾರಸ್ವಾಮಿ ಮಂಡ್ಯದಲ್ಲಿ ಸತತ ಪ್ರಚಾರ ನಡೆಸುತ್ತಿದ್ದಾರೆ. ಇನ್ನೊಂದೆಡೆ ಸುಮಲತಾ ಮತ್ತು ಅವರ ಬೆಂಬಲಿಗರು ಹಳ್ಳಿ ಹಳ್ಳಿಗೆ ಹೋಗಿ ಪ್ರಚಾರ ನಡೆಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಪ್ರಧಾನಿ ಮೋದಿ ಮೈಸೂರಿನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾಗೆ ಬೆಂಬಲ ಘೋಷಿಸಿದ್ದರು. ಹೀಗಾಗಿ ರಾಹುಲ್ ಗಾಂಧಿಯವರೇ ಕೆ.ಆರ್ ನಗರದಲ್ಲಿ ತಮ್ಮ ಅಭ್ಯರ್ಥಿ ನಿಖಿಲ್ ಗೆ ಮತಯಾಚನೆ ಮಾಡುವ ಸಾಧ್ಯತೆಯಿದೆ.
ರಾಹುಲ್ ಗಾಂಧಿ ರ‍್ಯಾಲಿ ಎರಡು ಉದ್ದೇಶಗಳನ್ನು ಈಡೇರಿಸಲಿದೆ, ಅದು ತಳಮಟ್ಟದಲ್ಲಿ ಭಿನ್ನಮತ ಹೊಗೆಯಾಡುತ್ತಿದ್ದರೂ ಕೂಡ ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿಯಾಗಿದೆ ಎಂದು ಜನತೆಯ ಮುಂದೆ ಬಿಂಬಿಸಲು ಮತ್ತು ಮಂಡ್ಯದ ಭಿನ್ನಮತೀಯ ಕಾಂಗ್ರೆಸ್ ನಾಯಕರಿಗೆ ನಿಖಿಲ್ ಪರ ಪ್ರಚಾರ ನಡೆಸಲು ಸ್ಪಷ್ಟ ಸಂದೇಶ ರವಾನಿಸುವುದು.