ನವದೆಹಲಿ: ಲೋಕಸಭಾ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ, ಕಾಲಿಗೆ ಚಕ್ರ ಕಟ್ಟಿಕೊಂಡಂತೆ, ದೇಶಾದ್ಯಂತ ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಂಡು ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಶ್ರಮ ಪಡುತ್ತಿದ್ದಾರೆ. ಒಟ್ಟಾರೆ 7 ಹಂತದ ಲೋಕಸಭಾ ಚುನಾವಣೆ ವೇಳೆ ಮೋದಿ ದೇಶಾದ್ಯಂತ 150ಕ್ಕೂ ಹೆಚ್ಚು ರ‍್ಯಾಲಿಯಲ್ಲಿ ಭಾಗಿಯಾಗಲಿದ್ದಾರೆ. ವಿಶೇಷವೆಂದರೆ ಮೊದಲ ಮತ್ತು ಎರಡನೇ ಹಂತದ ಚುನಾವಣಾ ವೇಳೆ ಚೈತ್ರ ನವರಾತ್ರಿ ಬಂದಿದ್ದು, ಮೋದಿ ಅವರು ಉಪವಾಸ ಮಾಡಿಕೊಂಡೇ ದೇಶ ಸಂಚಾರ ನಡೆಸುತ್ತಿದ್ದಾರೆ!
ಹೌದು. ದಕ್ಷಿಣ ಭಾರತದಲ್ಲಿ ಸೆಪ್ಟೆಂಬರ್- ಅಕ್ಟೋಬರ್ ಅವಧಿಯಲ್ಲಿ ಶರನ್ನವರಾತ್ರಿ ಆಚರಿಸಿದಂತೆ, ಉತ್ತರ ಭಾರತದಲ್ಲಿ ಯುಗಾದಿ ದಿನದಿಂದ ಆರಂಭವಾಗಿ ಮುಂದಿನ 9 ದಿನಗಳನ್ನು ಚೈತ್ರ ನವರಾತ್ರಿ ಎಂದು ಆಚರಿಸಲಾಗುತ್ತದೆ. ಈ ಚೈತ್ರ ನವರಾತ್ರಿ ಸಮಯದಲ್ಲೂ ಮೋದಿ ಉಪವಾಸ ನಡೆಸುತ್ತಾರೆ. ಹೀಗಾಗಿ ಪ್ರಧಾನಿ ಮೋದಿಯದ್ದೀಗ ಉಪವಾಸದ ಪ್ರವಾಸ. ಸುಮಾರು 45 ವರ್ಷಗಳಿಂದಲೂ ಮೋದಿ ಇದೇ ಸಂಪ್ರದಾಯ ಅನುಸರಿಸಿಕೊಂಡು ಬಂದಿದ್ದಾರೆ.
ಶರನ್ನವರಾತ್ರಿ ಕಠಿಣ: ಚೈತ್ರ ನವರಾತ್ರಿಗೆ ಹೋಲಿಸಿದರೆ ಶರನ್ನವರಾತ್ರಿ ಉಪವಾಸ ಬಲು ಕಠಿಣ. ಆ ಸಮಯದಲ್ಲಿ ಮೋದಿ ನಿತ್ಯ ಕೆಲವು ಗಂಟೆಗಳ ಕಾಲ ಧ್ಯಾನ, ಆರಾಧನೆ ಮಾಡುತ್ತಾರೆ. ಜೊತೆಗೆ ಈ ಸಮಯದಲ್ಲಿ ಅವರು ಕೇವಲ ನೀರು ಹಾಗೂ ಹಣ್ಣಿನ ರಸವನ್ನು ಮಾತ್ರ ಸೇವಿಸುತ್ತಾರೆ.
ಕೇವಲ ಹಣ್ಣು : ಚೈತ್ರ ನವರಾತ್ರಿಯಲ್ಲಿ ವಿಶೇಷ ಧ್ಯಾನ ಮಾಡುವುದಿಲ್ಲ. ಬದಲಾಗಿ ಯಾವುದಾದರೂ ಒಂದು ಹಣ್ಣನ್ನು ಆಯ್ಕೆ ಮಾಡಿಕೊಂಡು, 9 ದಿನಗಳ ಕಾಲ ಕೇವಲ ಆ ಹಣ್ಣನ್ನು ಮಾತ್ರ ಸೇವಿಸುತ್ತಾರೆ. ಉಳಿದಂತೆ ಯಾವುದೇ ಆಹಾರವನ್ನು ಮೋದಿ ಸೇವಿಸಲ್ಲ. ಈ ಬಾರಿ ಚೈತ್ರ ನವರಾತ್ರಿ ಏ.6ಕ್ಕೆ ಆರಂಭವಾಗಿದ್ದು, ಏ.14ಕ್ಕೆ ಮುಕ್ತಾಯವಾಗಲಿದೆ.
ಭರ್ಜರಿ ಯಾತ್ರೆ : ಚೈತ್ರ ನವರಾತ್ರಿ ಅವಧಿಯಲ್ಲಿ ಮೋದಿ ಅವರು 13 ರಾಜ್ಯಗಳಲ್ಲಿ 25ಕ್ಕೂ ಹೆಚ್ಚು ಚುನಾವಣಾ ರ‍್ಯಾಲಿಯಲ್ಲಿ ಭಾಗಿಯಾಗಿದ್ದಾರೆ. ಪ್ರತಿ ದಿನ 1-3 ರ‍್ಯಾಲಿಯಲ್ಲಿ ಭಾಗಿಯಾಗಿ, ಉತ್ಸಾಹದಿಂದಲೇ ಎಲ್ಲೆಡೆ ಸಂಚರಿಸುತ್ತಿದ್ದಾರೆ. ಉಪವಾಸ ಇದ್ದರೂ ಮೋದಿ ಅವರ ಚುನಾವಣಾ ಪ್ರಚಾರದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಒಡಿಶಾ, ಛತ್ತೀಸ್‍ಗಢ, ಪಶ್ಚಿಮ ಬಂಗಾಳ, ತ್ರಿಪುರಾ, ಮಣಿಪುರ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಗೋವಾ, ಬಿಹಾರ, ಅಸ್ಸಾಂ ಮತ್ತು ಕೇರಳದಲ್ಲಿ ಚುನಾವಣಾ ರ‍್ಯಾಲಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತಡ ರಾತ್ರಿಯವರೆಗೂ ಪಕ್ಷದ ಮುಖಂಡರ ಜೊತೆ ಸಭೆಯಲ್ಲಿ ಭಾಗಿಯಾಗುವ ಮೋದಿ ಭಾಗಿಯಾಗುತ್ತಾರೆ. ಕೆಲವೇ ಗಂಟೆಗಷ್ಟೇ ನಿದ್ದೆ ಮಾಡಿ, ಮರುದಿನದ ಪ್ರಚಾರಕ್ಕೆ ಸಜ್ಜಾಗುತ್ತಾರೆ.