Wednesday, November 20, 2024
ಸುದ್ದಿ

ಶುದ್ಧ ಹಾಲು ಉತ್ಪಾದನೆಯಲ್ಲಿ ದಕ್ಷಿಣ ಕನ್ನಡಕ್ಕೆ ಪ್ರಥಮ ಸ್ಥಾನ

 

ಕಾರ್ಕಳ : ಕಲಬೆರಕೆ ಇಲ್ಲದೆ ಅತ್ಯುತ್ತಮ ಗುಣಮಟ್ಟದ ಶುದ್ಧ ಹಾಲು ಉತ್ಪಾದನೆಯಲ್ಲಿ ಹೈನುಗಾರರ ವಿಶೇಷ ಸಹಕಾರದಲ್ಲಿ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ.ರೈತರು ಪೂರೈಸುವ ಹಾಲಿಗೆ ಎಲ್ಲ ಕಡೆಗಿಂತ ಅತಿ ಹೆಚ್ಚು ಅಂದರೆ 28.67 ರು. ನೀಡುತ್ತಿದೆ. ಇದೆಲ್ಲ ರೈತರು ಗುಣಮಟ್ಟದ ಹಾಲು ನೀಡಿದ್ದರಿಂದ ಸಾಧ್ಯವಾಗಿದೆ ಎಂದು ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ. ರವಿರಾಜ ಹೆಗ್ಡೆ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಗುರುವಾರ ಹೆಬ್ರಿಯ ಚೈತನ್ಯ ಯುವ ವೃಂದದ ಒಳಾಂಗಣ ಕ್ರೀಡಾಂಗಣದಲ್ಲಿ ಕರ್ನಾಟಕ ಹಾಲು ಮಹಾಮಂಡಳಿಯ ತರಬೇತಿ ಕೇಂದ್ರ ಮೈಸೂರು ಮತ್ತು ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ನಡೆದ 2 ದಿನಗಳ ಹೈನುರಾಸು ನಿರ್ವಹಣೆ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಒಕ್ಕೂಟವು 4.50 ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಿದ್ದು ಹೆಚ್ಚುವರಿ ಹಾಲನ್ನು ಬೇರೆ ಜಿಲ್ಲೆಗಳಿಗೆ ಸರಬರಾಜು ಮಾಡುತ್ತಿದ್ದು ಮತ್ತೂ ಹೆಚ್ಚಾದ ಹಾಲಿನಿಂದ ಪೌಡರ್ ಮಾಡುತ್ತಿದ್ದು ಅದರಿಂದ ಒಕ್ಕೂಟಕ್ಕೆ ನಷ್ಟವಾಗುತ್ತಿದೆ ಎಂದರು.
ತೃಪ್ತಿ ಹಾಲು ಮಾರುಕಟ್ಟೆಗೆ: ಹೆಚ್ಚುವರಿ ಹಾಲಿನಿಂದ ಒಕ್ಕೂಟಕ್ಕೆ ಆಗುವ ನಷ್ಟವನ್ನು ಭರಿಸಲು ಹೆಚ್ಚುದಿನ ಇಡಲು ಸಾಧ್ಯವಾಗುವ ‘ತೃಪ್ತಿ’ ಹಾಲನ್ನು ಮಾರುಕಟ್ಟೆಗೆ ಬಿಡಲಾಗಿದ್ದು, ಕೇರಳ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ರಾಜ್ಯಗಳಿಗೆ 10 ಸಾವಿರ ಲೀಟರ್ ಹಾಲು ಕಳುಹಿಸಲಾಗುತ್ತಿದೆ ಎಂದು ರವಿರಾಜ ಹೆಗ್ಡೆ ಹೇಳಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಒಕ್ಕೂಟದ ನಿರ್ದೇಶಕ ನೀರೆ ಕೃಷ್ಣ ಶೆಟ್ಟಿ ಕರ್ನಾಟಕ ರಾಜ್ಯವು ರಾಷ್ಟ್ರದಲ್ಲೇ 2ನೇ ಸ್ಥಾನ ಪಡೆದುಕೊಂಡು ಗುಣಮಟ್ಟದಲ್ಲಿ ಪ್ರಥಮ ಸ್ಥಾನದಲ್ಲಿದೆ. ಮುಂದಿನ ವರ್ಷ ಹಾಲು ಒಕ್ಕೂಟವು 5 ಲಕ್ಷ ಲೀಟರ್ ಹಾಲು ಸಂಗ್ರಹ ಮಾಡಿ ಪ್ರಥಮ ಸ್ಥಾನವನ್ನು ಪಡೆಯಲಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಕರ್ನಾಟಕ ಹಾಲು ಮಹಾಮಂಡಳಿಯ ಮೈಸೂರು ತರಬೇತಿ ಕೇಂದ್ರದ ಡಾ.ಬಿ. ನಾಗರಾಜ್, ಮಹಾದೇವ ಸ್ವಾಮಿ ತರಬೇತಿ ನಡೆಸಿಕೊಟ್ಟರು. ಹಾಲು ಒಕ್ಕೂಟದ ಸದಸ್ಯರ ಕಲ್ಯಾಣ ಮಂಡಳಿಯಿಂದ ಸುಮಿತ್ರಾ ಶೆಟ್ಟಿ, ಬೇಳಂಜೆಯ ಎಂ.ಸಿ. ಕೃಷ್ಣಮೂರ್ತಿ, ಹೆಬ್ರಿಯ ವೆಂಕಟೇಶ ಪ್ರಭು ಮತ್ತು ಬಚ್ಚಪ್ಪಿನ ಸುಗಂಧಿ ನಾಯ್ಕ್ ಅವರಿಗೆ ಸಹಾಯಧನ ನೀಡಲಾಯಿತು. ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ. ಅನಿಲ್ ಕುಮಾರ್ ಶೆಟ್ಟಿ, ಸಹಾಯಕ ವ್ಯವಸ್ಥಾಪಕರಾದ ಶಿವಪ್ಪ, ಶಂಕರ ನಾಯ್ಕ್, ಪಶು ವೈದ್ಯಾಧಿಕಾರಿ ಡಾ. ಧನಂಜಯ್, ಹಾಲು ಡೇರಿಯ ಅಧ್ಯಕ್ಷರಾದ ಕನ್ಯಾನದ ಲಕ್ಷ್ಮೀನಾರಾಯಣ ನಾಯಕ್, ಮಾತಿಬೆಟ್ಟಿನ ವಿಜಯಲಕ್ಷ್ಮೀ, ಬಚ್ಚಪ್ಪಿನ ವಿಶ್ವನಾಥ ಹೆಗ್ಡೆ, ಸುಮತಿ ಎಸ್. ಹೆಬ್ಬಾರ್, ಶಾರದಾ ಬಾಯಿ, ಅಶೋಕ ಕುಮಾರ ಶೆಟ್ಟಿ, ಚಂದ್ರ ನಾಯ್ಕ್, ಗೋಪಾಲ ಶೆಟ್ಟಿ, ಡೇರಿ ನೌಕರರ ಒಕ್ಕೂಟದ ಕಾರ್ಕಳ ತಾಲೂಕು ಅಧ್ಯಕ್ಷೆ ಶಿವಪುರದ ಇಂದಿರಾ ಉಪಸ್ಥಿತರಿದ್ದರು. ಶಂಕರ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response