ಮೈಸೂರು: ಮೈಸೂರಿನಲ್ಲಿ ಪ್ರತಾಪ್ ಸಿಂಹ ಸೋಲಾದರೆ, ಅದು ನನ್ನ ಸೋಲು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತಿಳಿಸಿದರು. ಮೈಸೂರಿನಲ್ಲಿ ಪ್ರತಾಪ್ ಸಿಂಹ ಪರ ಪ್ರಚಾರಕ್ಕೆ ಆಗಮಿಸಿ ಸಮಾವೇಶದಲ್ಲಿ ಮಾತನಾಡಿದ ಅವರು, ವೀರಶೈವ ಸಮಾಜದಲ್ಲಿ ಗೊಂದಲವನ್ನು ಉಂಟುಮಾಡುವ ಪಿತೂರಿ ನಡೆಯುತ್ತಿದೆ. ಯಾವುದಾದರೂ ಕಾರಣಕ್ಕೆ ಪ್ರತಾಪ್‍ಸಿಂಹಗೆ ಹಿನ್ನಡೆ ಉಂಟಾದರೆ ಅದು ಯಡಿಯೂರಪ್ಪನ ಸೋಲು. ಪ್ರತಾಪ್‍ಸಿಂಹ ಗೆಲುವಿನ ಮೇಲೆ ನನ್ನ ಭವಿಷ್ಯ ನಿರ್ಮಾಣವಾಗುತ್ತದೆ ಎಂದರು.
ಚಾಮುಂಡೇಶ್ವರಿ ಸೋಲನ್ನು ಸಿದ್ದರಾಮಯ್ಯ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ರಾಜಕೀಯ ದೊಂಬರಾಟವನ್ನ ಸಿದ್ದರಾಮಯ್ಯ ನೋಡಿದ್ದಾರೆ. 20 ಜನ ಕಾಂಗ್ರೆಸ್ ಎಂಎಲ್‍ಎಗಳು ಅಸಮಾಧಾನಗೊಂಡು ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಚುನಾವಣಾ ನಂತರ ಮೈತ್ರಿ ಸರ್ಕಾರ ಮುಳುಗಲಿದೆ ಎಂದರು. ಈಗಾಗಲೇ ರಾಜ್ಯ ಸರ್ಕಾರದ 20 ಶಾಸಕರು ಕುಮಾರಸ್ವಾಮಿ ಆಡಳಿತದ ಅಸಮಾಧಾನ ಹೊರಹಾಕಿದ್ದಾರೆ. ನಾವು 22ಕ್ಕೂ ಹೆಚ್ಚು ಸ್ಥಾನ ಗೆಲ್ಲಲ್ಲಿದ್ದೇವೆ ಚುನಾವಣೆ ನಂತರ ಮೈತ್ರಿ ಪಕ್ಷಗಳ ಹೊಡೆದಾಟ ಜಾಸ್ತಿ ಆಗಲಿದ್ದು, ಸರ್ಕಾರ ಬೀಳಲಿದೆ ಎಂದು ಯಡಿಯೂರಪ್ಪ ಭವಿಷ್ಯ ನುಡಿದರು.