ಮಂಗಳೂರು : ರಾಜ್ಯದ ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದಿದೆ. ಉಡುಪಿ ಜಿಲ್ಲೆ ಪ್ರಥಮ ಹಾಗೂ ದಕ್ಷಿಣ ಕನ್ನಡ ದ್ವಿತೀಯ ಸ್ಥಾನ ಗಳಿಸಿದೆ. ಈ ಸಾಲಿನಲ್ಲಿಯೂ ಬಾಲಕಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದು ಆದರೆ ಪಿಯುಸಿ ಫಲಿತಾಂಶವನ್ನೂ ರಾಜಕೀಯಕ್ಕೆ ಎಳೆತಂದು ಸಂಸದ ನಳಿನ್ ಕುಮಾರ್ ಕಟೀಲ್ ಸಿಎಂ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ.
ಪಿಯುಸಿಯಲ್ಲಿ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಅತ್ಯುತ್ತಮ ಸಾಧನೆ ಮಾಡಿದೆ. ಈಗಲಾದರೂ ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಯವರು ತಿಳುವಳಿಕೆ ಇಲ್ಲದವರು ಎಂಬ ಹೇಳಿಕೆಗೆ ಸಿಎಂ ಎಚ್.ಡಿ. ಕುಮಾರಸ್ವಾಮಿ ಕ್ಷಮೆ ಕೇಳಲಿ ಎಂದು ಸಂಸದ ಕಟೀಲ್ ಹೇಳಿದ್ದಾರೆ.
ಹೌದು ಈ ಹಿಂದೆ ಸಿಎಂ ಕರಾವಳಿ ಭಾಗದ ಉಡುಪಿ, ಕಾರ್ಕಳ ಕಾಪು ಜನತೆಗೆ ತಿಳುವಳಿಕೆ ಇಲ್ಲ, ಅಲ್ಲಿನ ಜನರು ಬಿಜೆಪಿಗೆ ಮಾತ್ರ ಮತ ಹಾಕುತ್ತಾರೆ. ಅವರಿಗೆ ಶಾಲೆ, ಕಾಲೇಜು ಕಟ್ಟಿಸಿಕೊಡೋಕೆ ಮಾತ್ರ ಕುಮಾರಸ್ವಾಮಿ, ರೇವಣ್ಣನೇ ಬೇಕು ಎಂದು ಕರಾವಳಿ ಭಾಗದ ಜನರನ್ನು ತೆಗಳಿದ್ದರು. ಕುಮಾರಸ್ವಾಮಿ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಈ ಸಂಬಂಧ ಟ್ವೀಟ್ ಮಾಡಿರುವ ಸಂಸದ ಕಟೀಲ್ “ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಮತ್ತೊಮ್ಮೆ ಮೇಲುಗೈ ಸಾಧಿಸಿದ ಉಡುಪಿ – ದಕ್ಷಿಣ ಕನ್ನಡ ರಾಜ್ಯದಲ್ಲೇ ಉಡುಪಿ ಪ್ರಥಮ ಸ್ಥಾನ ದಕ್ಷಿಣ ಕನ್ನಡ ದ್ವಿತೀಯ ಸ್ಥಾನ ಮುಖ್ಯಮಂತ್ರಿಯವರೇ.. ಇದನ್ನೂ ನೋಡಿಯೂ ಉಡುಪಿ- ದಕ್ಷಿಣ ಕನ್ನಡದ ಜನಗಳು ತಿಳುವಳಿಕೆ ಇಲ್ಲದವರೂ ಅಂತೀರಾ.. ಕ್ಷಮೆ ಕೇಳುವ ಸಮಯ ..” ಎಂದು ಬರೆದುಕೊಂಡಿದ್ದಾರೆ.