ಚೀನಾದ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಟಿಕ್ ಟಾಕ್‍ಗೆ ವಿಧಿಸಲಾಗಿರುವ ತಾತ್ಕಾಲಿಕ ನಿಷೇಧಕ್ಕೆ ತಡೆ ಹೇರಲು ಮದ್ರಾಸ್ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ. ಮುಂದಿನ ವಿಚಾರಣೆಯನ್ನು ಎ.24ಕ್ಕೆ ಮುಂದೂಡಿದೆ.
ಪ್ರಕರಣದಲ್ಲಿ ಹಿರಿಯ ವಕೀಲ ಅರವಿಂದ್ ದಾತಾರ್‍ರನ್ನು ಸ್ವತಂತ್ರ ಕೌನ್ಸಿಲ್ ಆಗಿ ನೇಮಕ ಮಾಡುವಂತೆ ಜಸ್ಟಿಸ್‍ಗಳಾದ ಎನ್.ಕಿರುಬಕರನ್ ಹಾಗೂ ಎಸ್‍ಎಸ್ ಸುಂದರ್ ಅವರನ್ನೊಳಗೊಂಡ ನ್ಯಾಯಪೀಠ ಆದೇಶಿಸಿದೆ. ಟಿಕ್‍ಟಾಕ್ ಆಯಪ್‍ನಿಂದಾಗಿ ಆಗುವ ಪರಿಣಾಮದ ಬಗ್ಗೆ ಪರಿಶೀಲಿಸಲು ದಾತಾರ್‍ರನ್ನು ನೇಮಕ ಮಾಡಲಾಗಿದೆ.
ಅರವಿಂದ್ ದಾತಾರ್ ಸ್ವತಂತ್ರ ಕೌನ್ಸಿಲ್ ಆಗಿ ನೇಮಿಸಿರುವ ಹೈಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ ಎಂದು ಟಿಕ್‍ಟಾಕ್ ತಿಳಿಸಿದೆ.
ಆಯಪ್ ಡೌನ್‍ಲೋಡ್ ಮಾಡುವುದನ್ನು ಬ್ಲಾಕ್ ಮಾಡಬೇಕೆಂದು ಟಿಕ್‍ಟಾಕ್‍ಗೆ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಸೋಮವಾರ ನಿರ್ದೇಶನ ನೀಡಿತ್ತು.