ಬಂಟ್ವಾಳ : ಬಾಯಿ ಬಿಟ್ಟರೆ ಸಂವಿಧಾನ, ಸೆಕ್ಷನ್ ಎಂದು ಹೇಳುವ ಉಗ್ರಪ್ಪ ಅವರು ಮತದಾನದ ಹಕ್ಕನ್ನೇ ಮರೆತಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಹೌದು ಗುರುವಾರ ಕರ್ನಾಟಕದ ಮೊದಲ ಹಂತ ಹಾಗೂ ರಾಷ್ಟ್ರದ ಎರಡನೇ ಹಂತದ ಚುನಾವಣೆ ನಡೆಯಿತು. ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾರರು ತಮ್ಮ ತಮ್ಮ ಹಕ್ಕನ್ನು ಚಲಾಯಿಸಿದರು. ಆದರೆ, ಮತದಾನ ಮಾಡಿ ಮಾದರಿ ಆಗಬೇಕಿದ್ದ ಬಳ್ಳಾರಿ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಉಗ್ರಪ್ಪ ಅವರು ಮತದಾನವನ್ನ ಕಡೆಗಣಿಸಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ವಿ.ಎಸ್.ಉಗ್ರಪ್ಪ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಮತದಾರರಾಗಿದ್ದು, ಎಚ್‍ಎಸ್‍ಆರ್ ಲೇಔಟ್ ಮತ ಕೇಂದ್ರದಲ್ಲಿ ಮತದಾನ ಮಾಡಬೇಕಿತ್ತು. ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಉಗ್ರಪ್ಪ, ಏ.23ಕ್ಕೆ ಬಳ್ಳಾರಿ ಕ್ಷೇತ್ರದಲ್ಲಿ ಮತದಾನ ಇರುವ ಹಿನ್ನೆಲೆಯಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ. ಬಾಯಿ ಬಿಟ್ಟರೆ ಸಂವಿಧಾನ, ಸೆಕ್ಷನ್ ಎಂದು ಹೇಳುವ ಉಗ್ರಪ್ಪ ಅವರು ಮತದಾನದ ಹಕ್ಕನ್ನೇ ಮರೆತಿರುವುದು ವಿಪರ್ಯಾಸವೇ ಸರಿ. ಬೇರೆಯವರು ನನಗೆ ಮತ ಹಾಕಬೇಕೆನ್ನುವ ಉಗ್ರಪ್ಪ ತಾವು ಸಹ ಮಾದರಿ ಆಗಬೇಕಲ್ಲವೆ? ಬೇರೆಯವರಿಗೆ ಸಂವಿಧಾನ ಬೋಧಿಸಲು ಉಗ್ರಪ್ಪಗೆ ನೈತಿಕತೆ ಇದೆಯೇ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಒಟ್ಟಿನಲ್ಲಿ ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ. ತಪ್ಪದೇ ಮತದಾನ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕು. ಮತ ಚಲಾಯಿಸುವುದು ಎಲ್ಲರ ಹಕ್ಕು ಎಂದು ಚುನಾವಣಾ ಸಮಯದಲ್ಲಿ ಉದ್ದುದ್ದ ಭಾಷಣವನ್ನು ಬಿಗಿಯುವ ನಾಯಕರೇ ಮತದಾನ ಮಾಡುವುದನ್ನು ನಿರ್ಲಕ್ಷಿಸಿ, ಮತ್ತೊಬ್ಬರಿಗೆ ತಿಳಿ ಹೇಳುವ ಅರ್ಹತೆ ಇದೆಯಾ ಎಂಬ ಪ್ರಶ್ನೆಗೆ ಬಳ್ಳಾರಿ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಉಗ್ರಪ್ಪ ಅವರು ಉತ್ತರದಾಯಿ ಆಗಿದ್ದಾರೆ.