ಐದು ವರ್ಷ ಕಾಲ ದೇಶದ ಪ್ರಧಾನಿಯಾಗಿ ಸಮಾಜಕ್ಕೆ ಕೊಡುಗೆ ನೀಡದ ನರೇಂದ್ರ ಮೋದಿ “ಅವರ ಜೀವನದ ಘಟನೆಗಳನ್ನು ಆಧರಿಸಿದ ಚಲನಚಿತ್ರ ನಿರ್ಮಿಸಲಾಗಿದೆ. ಆದರೆ ಪ್ರಧಾನಿಯಾಗಿ ಅವರ ಜೀವನ ದೊಡ್ಡ ತಮಾಷೆ. 56 ಇಂಚಿನ ಎದೆ ಹೊಂದಿರುವುದಾಗಿ ಹೇಳಿಕೊಂಡ ಅವರು ಯಾವ ಸಾಧನೆಯನ್ನೂ ಮಾಡಲಿಲ್ಲ. ಅವರ ಬಗೆಗಿನ ಚಿತ್ರ ಭಾರತದ ಪ್ರಜಾಪ್ರಭುತ್ವ, ಬಡತನ ಹಾಗೂ ವೈವಿಧ್ಯತೆಯ ಅಣಕ. ಇವೆಲ್ಲಕ್ಕೂ ಅವರು ಧಕ್ಕೆ ತಂದಿದ್ದಾರೆ” ಎಂದು ಮಾಂತೋಡ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಯೋಪಿಕ್‍ಗೆ ಅರ್ಹ ವ್ಯಕ್ತಿಯಲ್ಲ; ಅವರ ಬಗ್ಗೆ ಹಾಸ್ಯಚಿತ್ರ ನಿರ್ಮಿಸಬೇಕಿತ್ತು ಎಂದು ಖ್ಯಾತ ನಟಿ ಹಾಗೂ ಮುಂಬೈ ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಊರ್ಮಿಳಾ ಮಾತೋಂಡ್ಕರ್ ವ್ಯಂಗ್ಯವಾಡಿದ್ದಾರೆ.
“ಪ್ರಜಾಪ್ರಭುತ್ವ ಹೊಂದಿದ ದೇಶದ ಪ್ರಧಾನಿಯೊಬ್ಬರು ಐದು ವರ್ಷಗಳಲ್ಲಿ ಒಂದು ಪತ್ರಿಕಾಗೋಷ್ಠಿಯನ್ನೂ ನಡೆಸಿಲ್ಲ ಎಂದಾದರೆ ಇದಕ್ಕಿಂತ ಕೆಟ್ಟದ್ದು ಏನಿದೆ” ಎಂದು ಊರ್ಮಿಳಾ ಕೆಣಕಿದ್ದಾರೆ.
ಊರ್ಮಿಳಾ ಮಾಂತೋಡ್ಕರ್ ಕಳೆದ ತಿಂಗಳು ಕಾಂಗ್ರೆಸ್ ಪಕ್ಷ ಸೇರಿದ್ದು, ಉತ್ತರ ಮುಂಬೈ ಕ್ಷೇತ್ರದಲ್ಲಿ ಹಾಲಿ ಸಂಸದ ಗೋಪಾಲ ಶೆಟ್ಟಿ ವಿರುದ್ಧ ಕಣಕ್ಕೆ ಇಳಿದಿದ್ದಾರೆ.
“ವಾಸ್ತವವಾಗಿ ಅವರು ಈಡೇರಿಸದ ಭರವಸೆಗಳ ಬಗ್ಗೆ ಹಾಸ್ಯಚಿತ್ರ ನಿರ್ಮಿಸಬೇಕಿತ್ತು” ಎಂದು ಅಭಿಪ್ರಾಯಪಟ್ಟಿದ್ದಾರೆ. ನಟ ವಿವೇಕ್ ಒಬೆರಾಯ್ ಅಭಿನಯದ “ಪಿಎಂ ನರೇಂದ್ರ ಮೋದಿ” ಚಿತ್ರವನ್ನು ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೆ ಬಿಡುಗಡೆ ಮಾಡದಂತೆ ಚುನಾವಣಾ ಆಯೋಗ ಆದೇಶಿಸಿದೆ.
ಎನ್‍ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಒಬೆರಾಯ್ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಕುರಿತು, “ನಾನ್ಯಾಕೆ ರಾಹುಲ್ ಗಾಂಧಿ ಬಗ್ಗೆ ಬಯೋಪಿಕ್ ನಿರ್ಮಿಸಬೇಕು? ಅವರು ಅಂಥ ಗಣನೀಯವಾದ ಯಾವ ಸಾಧನೆ ಮಾಡಿದ್ದಾರೆ?” ಎಂದು ಪ್ರಶ್ನಿಸಿದ್ದರು.